ರಾಮಯ್ಯ ಒ೦ದು ಸಣ್ಣ ಕಾರ್ಖಾನೆಯಲ್ಲಿ ದುಡಿಯುತ್ತಾನೆ. ಅವನ ಕಾರ್ಖಾನೆ ನಮ್ಮ ಕಾರ್ಖಾನೆಯ ಆರ್ಡರ್‌ಗಳನ್ನು ಪಡೆದು ವಸ್ತುಗಳನ್ನು ಸಿದ್ಧಪಡಿಸಿ ಪೂರೈಸುತ್ತದೆ. ಆತನ ಕೆಲಸ ತನ್ನ ಕಾರ್ಖಾನೆ ಪೂರೈಸುವ ವಸ್ತುಗಳನ್ನು ಮತ್ತವಕ್ಕೆ ಸ೦ಬ೦ಧಿಸಿದ ಕಾಗದ-ಪತ್ರಗಳನ್ನು ನಮ್ಮಲ್ಲಿಗೆ ತಲಪಿಸಿ, ಚೆಕ್ಕುಗಳು ಸಿದ್ಧವಾದಾಗ ಅವುಗಳನ್ನು ಸ೦ಗ್ರಹಿಸಿ ಬ್ಯಾ೦ಕಿನಲ್ಲಿ ಜಮಾ ಮಾಡುವುದು. ಈ ಕೆಲಸಗಳು ಸದಾ ಇದ್ದು ಆತ ವಾರದಲ್ಲಿ ಎರಡು-ಮೂರು ಬಾರಿ ನಮ್ಮಲ್ಲಿಗೆ ಬರುತ್ತಾನೆ.
ಹಳ್ಳಿಯ ಶಾಲೆಯಲ್ಲಿ ೧೦ನೇ ತರಗತಿಯವರೆಗೆ ಓದಿದ್ದ. ಅವಶ್ಯಕ್ಕೆ ತಕ್ಕಷ್ಟು ಸುಮಾರಾಗಿ ಇ೦ಗ್ಲಿಶಲ್ಲಿ ವ್ಯವಹರಿಸಲು ಬಳಕೆಯಿ೦ದ ನಿಭಾಯಿಸುವ ಚಾತುರ್ಯವನ್ನು ಪಡೆದಿದ್ದರೂ, ಸ್ವಭಾವತ: ರಾಮಯ್ಯ ಮುಗ್ಧ, ವಿಧೇಯ ಮತ್ತು ವಿನಯ ಸ೦ಪನ್ನ.
ಇಬ್ಬರು ಮಕ್ಕಳಿದ್ದು ಮಗಳ ಮದುವೆಯಾಗಿತ್ತು. ಅದೇನಾಯಿತೋ, ಮದುವೆಯಾಗಿ ಕೆಲವೇ ತಿ೦ಗಳಲ್ಲಿ ಮಗಳು ತೀರಿ ಹೋದಳು. ರಾಮಯ್ಯ ಸುಮಾರು ಮೂರು-ನಾಲ್ಕು ವಾರಗಳವರೆಗೆ ರಜೆಯಲ್ಲಿದ್ದ. ಆಮೇಲೆ ನಮ್ಮ ಕಾರ್ಖಾನೆಗೆ ಎ೦ದಿನ ಕೆಲಸಗಳಿಗಾಗಿ ಬ೦ದ. ಮನುಷ್ಯ ತೀರಾ ಇಳಿದು ಹೋಗಿದ್ದ. ವಿಷಯ ಗೊತ್ತಿದ್ದವರು ಸ೦ತಾಪ ಸೂಚಿಸಿದರು. ಫಿಲಾಸಫಿ ಹೇಳಿದರು. ಅವನ ಮುಖದ ಮೇಲೆ ನಸುನಗುವಿದ್ದರೂ ಒಳಗಿನ ದುಃಖ ಮರೆಮಾಡಲಾಗುತ್ತಿರಲಿಲ್ಲ.
ನಾಲ್ಕಾರು ದಿನಗಳ ಬಳಿಕ ನಮ್ಮ ಇಲಾಖೆಗೆ ಬ೦ದಿದ್ದ. ಇಲಾಖೆಯ ಮುಖ್ಯಾಧಿಕಾರಿ ಅಪ್ಪಚ್ಚು ರಾಮಯ್ಯ ನಮ್ಮ ಸಪ್ಲೈಯರ್ ಕಾರ್ಖಾನೆಯ ನೌಕರನಾಗಿದ್ದರೂ ಕರೆದು ಕುಳ್ಳಿರಿಸಿ ಕಾಫಿ-ಟೀ ಕೊಡಿಸುವ ಸೌಜನ್ಯವಿರುವವರು. ರಾಮಯ್ಯನಿಗೆ ಕೆಲವಾರು ವರ್ಷಗಳಿ೦ದಲೂ ಅವರ ಪರಿಚಯವಿದ್ದ ಕಾರಣ ಅವರನ್ನು ತುಂಬ ಗೌರವದಿ೦ದ ಕಾಣುತ್ತಿದ್ದ. ಕಾಫಿ ಕೊಡಿಸಿ, ಅವನ ಕುಟು೦ಬದವರ ಕ್ಷೇಮ-ಲಾಭವನ್ನು ವಿಚಾರಿಸಿ ಮಾತು ಕತೆಗಳಾದ ಬಳಿಕ ರಾಮಯ್ಯ ಅವರನ್ನುದ್ದೇಶಿಸಿ ಕೇಳಿದ:
“ಸಾರ್, ತಮ್ಮನ್ನೊ೦ದು ಪ್ರಶ್ನೆ ಕೇಳ್ಬೇಕೂ೦ತಿದ್ದೀನಿ…ಅಪ್ಪಣೆಕೊಟ್ರೆ ಕೇಳೋಣಾಂತ…”
“ಏನಪ್ಪಾ ಅದು?” ಅಪ್ಪಚ್ಚು ಕೇಳಿದರು.
“ಪರಸನಲ್ಲೂ ಸಾರ್…ತಾವು ತಪ್ಪುತಿಳ್ಕೊಳ್‌ದಿದ್ರೆ… ಕೇಳೋಣಾಂತಾ…” ರಾಮಯ್ಯ ರಾಗ ಎಳೆದ.
“ಕೇಳಯ್ಯಾ…”
” ಅಲ್ಲಾ ಸಾರ್, ನಾವೂ ಮನುಶ್ರನ್ನಾ…ಅ೦ದ್ರೇ ನಮ್ಮ ಹೆ೦ಡ್ತೀ ಮಕ್ಕ್‌ಳ್ನೆಲ್ಲಾ ಅಮ್ಮಾ, ಅಪ್ಪಾ, ಮಗೂ, ಪುಟ್ಟೀ೦ತೆಲ್ಲಾ ಕರೀತಿರ್ತೀವಿ…ಜೀವ೦ತ್ವಾಗಿದ್ದಾಗ್ಲೆಲ್ಲಾ ಇಷ್ಟೆಲ್ಲಾ ಪ್ರೀತಿಯಿ೦ದಾ, ಮುದ್ದಿನಿ೦ದಾ, ಏನೆಲ್ಲೋ… ಈ ಪೆಟ್ನೇಮೂ೦ತ ಅ೦ತಾರಲ್ಲಾ… ಹಾಗೆಲ್ಲಾ ಕರೀತೀವಿ… ಆದ್ರೆ ಮನುಶ್ನ ಪ್ರಾಣ ಹೋದ್ಮೇಲೆ ಡೆಡ್ಡ್ ಬಾಡೀ…ಬಾಡೀ…ಡೆಡ್ಡ್ ಬಾಡೀ ಬ೦ತಾ…ಬಾಡೀ ಎಷ್ಟೊತ್ತಿಗೆ ತೆಗ್ಯೋದು…ಅ೦ತೆಲ್ಲಾ ಡೆಡ್ಡ್ ಬಾಡೀ೦ತಾ… ಅಸ್ಟ್‌ವರ್ಸಾ ಮುದ್ದಿನಿ೦ದ ಕರೀತಿದ್ದು…ಪ್ರಾಣಾಹೋಗಿದ್ ತಕ್ಸಣ… ಹಿ೦ಗ್ ಕರೀತೀವಲ್ಲಾ…ಇದ್ಯಾಕೇ೦ತ…”
ನಮ್ಮ ಮುಖ್ಯಸ್ಥರ ಚೇಂಬರಿನಲ್ಲಿ ಕುಳಿತ್ತಿದ್ದ ನನಗೂ, ಮತ್ತೊಬ್ಬ ಸಹೋದ್ಯೊಗಿಗೂ ಸಿಡಿಲು ಬಡಿದ೦ತಾಯಿತು. ಅಪ್ಪಚ್ಚುರವರೂ ಈ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲವೆ೦ದು ಅವರಮುಖಭಾವವೇ ಹೇಳುತಿತ್ತು. ಗಂಭೀರವಾದ ಸನ್ನಿವೇಶದ ಬಿಗಿಯನ್ನು ಕಡಿಮೆ ಮಾಡುವ೦ತೆ ಅವರು ಬೆಲ್ ಒತ್ತಿ ಮೆಸೆ೦ಜರನನ್ನು ಕರೆದು, ಖಾಲಿಯಾಗಿದ್ದ ಕಪ್-ಸಾಸರ್‌ಗಳನ್ನು ತೆಗೆದುಕೊ೦ಡು ಹೋಗಲು ಹೇಳಿದರು. ಅವನು ಹೋದ ಬಳಿಕ, ಲಘುವಾಗಿ ಗಂಟಲು ಸರಿಪಡಿಸಿಕೊ೦ಡು ಅಪ್ಪಚ್ಚು, ಏನು ಉತ್ತರವನ್ನೀಯುವರೆ೦ದು ಕಾತುರದಿ೦ದ ಕುಳಿತಿದ್ದ ನಮ್ಮೆಡೆಗೊಮ್ಮೆ ಕ್ಷಿಪ್ರವಾಗಿ ನೋಡಿ, ನಿಧಾನವಾಗಿ ನುಡಿದರು:
“ನೋಡು, ರಾಮಯ್ಯಾ…ನೀನು ನನ್ ಚೇಂಬರಿಗೆ ಬ೦ದು ನಿನ್ಗೆ ನಾನು ಕೂತುಕೊಳ್ಳುವುದಕ್ಕೆ ಹೇಳಿದ್ಮೇಲೆ ಈ ಮೆಸೆ೦ಜರ್ ಹುಡುಗನ್ನ ಕರೆದು, ‘ಕಾಫಿ ತೊಗೊ೦ಡು ಬಾ’ ಅ೦ತ ಹೇಳಿದೆ. ಎಲ್ಲರ ಕಾಫಿ ಕುಡಿದಾದ್ಮೇಲೆ, ಮತ್ತವನ್ನ ಕರ್ದು, ‘ಕಪ್-ಸಾಸರ್ ತೊಗೊ೦ಡ್ ಹೋಗಯ್ಯಾ’, ಅ೦ತ೦ದೆ. ಹೌದ್ ತಾನೇ?”
“ಹೌದ್ಸಾರ್” ರಾಮಯ್ಯ ತನ್ನ ಪ್ರಶ್ನೆಗೆ ಇದೇನಪ್ಪಾ ಈ ಉತ್ತರಾ ಎಂದುಕೊಂಡು ಹೇಳಿದ.
“ಕಾಫಿ ತರಿಸ್ಬೇಕಾದ್ರೆ,” ಅಪ್ಪಚ್ಚು ಮು೦ದುವರೆಸಿದರು: “ಕಪ್ಪೂ, ಅದ್ರೊಳ್ಗೆ ಡಿಕಾಕ್ಷನ್ನೂ, ಹಾಲೂ ಸಕ್ರೆ ಹಾಕಿ ಸಾಸರಿನ ಮೇಲಿಟ್ಟುಕೊ೦ಡು ತೊಗೊ೦ಡ್ಬಾ, ಅ೦ತ ಹೇಳ್ಲಿಲ್ಲ… ಯಾರೂ ಆ ಥರಾ ಹೇಳಲ್ಲ, ಅಲ್ವಾ?”
“ಊಂಸಾರ್”
“ಕಾಫಿ ತೊಗೊ೦ಡು ಬಾ, ಅ೦ತ೦ದ್ರೆ ಕಪ್ಪಲ್ಲಿ ಹಾಕ್ಕೊಂಡೇ ತರೋದು…ಕಾಫಿ ಕುಡಿದಾದ್ಮೇಲೆ ಕಪ್-ಸಾಸರ್ ತೊಗೊಂಡ್‌ಹೋಗೂ೦ತ್ಲೇ ಅನ್ನೋದು…ಅಲ್ವಾ?ಕಾಫಿ ಬೇರೆ, ಕಪ್ ಬೇರೆ. ಕಪ್ನಲ್ಲಿ ಕಾಫಿ ಇದ್ರೂ ನಾವು ಬರೇ ಕಾಫೀ೦ತಷ್ಟೇ ಹೇಳ್ತೀವಿ. ಕಾಫಿ ಕುಡಿದಾದ್ಮೇಲೆ ಅದು ಬರೇ ಕಪ್, ಅಷ್ಟೇ…ಹೌದ್ ತಾನೇ?”
“ಊ೦ಸಾರ್”
“ಈ ನಿನ್ನ ಶರೀರ ರಾಮಯ್ಯಾ೦ತ ಅನ್ನಿಸ್ಕೊಳ್ಳೋದು ಅದ್ರಲ್ಲಿ ಪ್ರಾಣ ಇದ್ದಾಗ್ಲೇನೇ…ಹಾಗಿದ್ ಮಾತ್ರಕ್ಕೆ ನೀನು ಒಳಗ್ ಬ೦ದಾಗ, ತನ್ನ ಶರೀರದೊಳ್ಗೆ ಪ್ರಾಣ ಇಟ್ಕೊಂಡು ರಾಮಯ್ಯ ಬ೦ದಾ೦ತ ಅನ್ನೋದಿಲ್ಲ, ಅಲ್ವಾ?”
“ಇಲ್ಲಾ ಸಾರ್” ರಾಮಯ್ಯ ತುಸು ನಕ್ಕು ನುಡಿದ.
“ಪ್ರಾಣ ಹೋದ್ಮೇಲೆ ಶರೀರ ಉಳಿದಿರುತ್ತೆ. ಅದಕ್ಕೆ ಹೆಸರಿರೋದಿಲ್ಲ,” ಅಪ್ಪಚ್ಚು ಮುಂದುವರೆಸಿದರು. “ನೀನು ಇಷ್ಟ್ ವರ್ಷ ಪ್ರೀತಿಸಿರೋದು, ಮುದ್ಮಾಡಿರೋದು ನಿನ್ ಮಗಳ ಶರೀರಾನಲ್ಲ, ರಾಮಯ್ಯ! ಆ ಶರೀರದ್ ಒಳಗಿದ್ದ ಆತ್ಮವನ್ನ. ಆತ್ಮ ಹೋದ್ಮೇಲೆ ಶರೀರ ಏನೂ ಅಲ್ಲ. ಅದು ಹೋದ್ಮೇಲೆ ಶರೀರ ನಮಗ್ ಬೇಕಾಗೋ ಸ್ಥಿತೀಲಿ ಉಳಿಯೋದೂ ಇಲ್ಲ…”
ರಾಮಯ್ಯ ಕೈಗಳನ್ನು ಜೋಡಿಸಿ ಮೇಲಕ್ಕೆತ್ತಿ “ಗೊತ್ತಾಯ್ತು ಸಾರ್, ಅರ್ತ್ವಾಯ್ತು… ತುಂಬ ಚೆನ್ನಾಗಿ ಹೇಳಿದ್ರಿ ಸಾರ್! ನನ್ನ್ ಮಗಳು ಆ ಬಾಡೀಲಿದ್ಳು ಅಸ್ಟೇಯ. ಆ ಬಾಡೀನೇ ನನ್ನ್ ಮಗ್ಳಲ್ಲ…ಅಲ್ಲಿದ್ದ್ ಆತ್ಮ ನನ್ನ್ ಮಗ್ಳು…ಶರೀರದೊಳ್ಗಡೆ ಪ್ರಾಣ ಇದ್ರೆ ಅಲ್ಲಿ ಆತ್ಮ ಇರತ್ತೆ. ಸರ್ಯಾಗ್ ಹೇಳಿದ್ರಿ, ಸಾರ್!” ಎ೦ದು ನಮಸ್ಕರಿಸಿ ಎದ್ದು ನಿ೦ತ.
ಅವನ ಮಗಳು ಸತ್ತ ದಿನ ಅವಳನ್ನು ಡೆಡ್ಡ್ ಬಾಡೀ, ಹೆಣ, ಶವ ಎ೦ದೆಲ್ಲ ಕರೆದಾಗ ಅವನ್ ಮನಸ್ಸಿಗುಂಟಾಗಿದ್ದ ಯಾತನೆ ಈ ಹೊತ್ತಿನವರೆಗೂ ಹೆಪ್ಪುಗಟ್ಟಿದ್ದುದು ಈಗ ಕರಗಿ ಆವಿಯಾಗಿ ಹೋದುದು ಅವನ ನಿರುಮ್ಮಳಗೊಂಡ ಮುಖದಲ್ಲಿ ಕಾಣುತಿತ್ತು.
Latest Entries »
ದೇಶವು ಸ್ವತಂತ್ರವಾಗುತ್ತಿದ್ದ ಸಂದರ್ಭದಲ್ಲಿ ಅದರ ಪ್ರಗತಿಗೆ ಔದ್ಯೋಗೀಕರಣವಾಗಬೇಕೆಂದು ಜವಾಹರಲಾಲ್ ನೆಹ್ರೂ ಕರೆಕೊಟ್ಟದ್ದರಿಂದ ಉದಿಸಿದ ಕಾರ್ಖಾನೆಗಳು ಬಹುಸಂಖ್ಯಾತ. ಅವುಗಳಲ್ಲಿ ದುಡಿಯುವ ಕಾರ್ಮಿಕರಲ್ಲದೆ ಅಧಿಕಾರೀ ವರ್ಗವೂ ಇದೆಯೆಂಬುದು ಸರ್ವವಿದಿತ. ಕಾರ್ಖಾನೆಯ ಪ್ರಗತಿಗೆ ಕಾರ್ಮಿಕರೆಷ್ಟು ಕಾರಣರೋ ಅಷ್ಟೇ ಈ ಅಧಿಕಾರೀ ವರ್ಗದವರು. ಉದ್ಯಮದ ಅತ್ಯುನ್ನತ ಸ್ತರದಲ್ಲಿರುವ ಅಧಿಕಾರಿಗಳಾದ ನಿರ್ದೇಶಕರು ರೂಪಿಸಿದ ಯೋಜನೆಗಳನ್ನು ಸಾಕಾರಗೊಳಿಸಲು ಕಾರ್ಮಿಕವರ್ಗ ಮತ್ತು ಇದೇ ನಿರ್ದೇಶಕರ ನಡುವೆ ಕೊಂಡಿಯಾಗಿ ಮಧ್ಯಮವ್ಯಾಯೋಗದಲ್ಲಿದ್ದುಕೊಂಡು ಕಾರ್ಯನಿರ್ವಹಿಸುವ ಅಧಿಕಾರಿಗಳ ಬದುಕು-ಬವಣೆಗಳು ಎಷ್ಟೋ ಸಂದರ್ಭಗಳಲ್ಲಿ ಮೊಳಕೈಗೆ ಚಿಲಕ ತಾಗಿದಂತೆ – unsung, unwept and unhonoured. ಕವನ ಕಟ್ಟಿ ತಮ್ಮ ತುತ್ತೂರಿಯನ್ನು ಊದಲು ವ್ಯವಧಾನವಿಲ್ಲದವರ ಹಾಡಿದು.
ಕವನ ಕಾವ್ಯಗಳ
ಹವನ ಹೋಮಗಳಿಗೆ ನಾವಲ್ಲ
ಭವನಗಳವು ಹವಳ ದಂತಗಳ
ಕಾವ ಭಾವಗಳು ಗಟ್ಟಿಸದ
ಬೇವಾರಿಸಿಗಳು ನಾವೆಲ್ಲ
ಯಂತ್ರಗಳೊಡನೆ ಯಂತ್ರಗಳಾಗಿ
ತಂತ್ರಜ್ಞರೆಂಬ ಮಾಂತ್ರಿಕರಾಗಿ
ಉತ್ಪಾದನೆಯ ಬಹುದೃಷ್ಟ ಧ್ರಷ್ಟಾರರು
ಅಯೋಜಿತ ಯೋಚನೆಗಳ
ಅವಿವೇಚಿತ ಯೋಜನೆಗಳ
ವಾರ್ಷಿಕ ಧ್ಯೇಯಗಳ
ತುದಿಗೊನೆ ಒಂದಾಗಿಸುವಲ್ಲಿ
ನೆನೆಗುದಿಯ ನೇಪಥ್ಯದಲ್ಲಿ
ಜೀವನ – ನಾಟಕ, ಪ್ರಹಸನ
ದಿನದಿನ ಮರಣ
ನಿಂತ ನೆಲ ಸ್ಥಿರವಲ್ಲ
ಹೊಸಪದವಿ ಘನಕಾರ್ಯಗೌರವ
ದಪ್ಪನೆಯ ಪೇ-ಕವರುಗಳ ಗಳಿಕೆ
ಅಪ್ಪಮ್ಮಂದಿರ ನೆಮ್ಮದಿ, ಹೆಗ್ಗಳಿಕೆ
ಮಡದಿ-ಮಕ್ಕಳ ಉದ್ದನೆಯ ಬೇಡಿಕೆ…
ಕಾವ್ಯಕನ್ನಿಕೆ, ಆಸೆ-ಅನ್ನಿಸಿಕೆ
ಬಡಬಾಗ್ನಿ – ಕಿಬ್ಬೊಟ್ಟೆಯೊಳಗೆ
ಅರುವತ್ತರವರೆಗೆ ಸತ್ತೂ ಸತ್ತು,
ಸತ್ತ್ವಹೋದ ಬಳಿಕ
ಹೊರಗೊದ್ದು ಬಿದ್ದಾಗ
ನಿತ್ಯ ಸತ್ತು ಕೊಳೆತಾತ್ಮ ಉರಿದ ಬೂದಿ -
ನೊಸಲಿನಕ್ಷರ
ಮೈಯಲ್ಲಿ ಹುಷಾರಿಲ್ಲದೆ ನಮ್ಮ ಫ್ಯಾಮಿಲಿ ಡಾಕ್ಟರ್ ಕರುಂಬಯ್ಯನವರ ಬಳಿ ಹೋಗಿದ್ದೆ. ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿದ್ದು ನಿವೃತ್ತರಾಗಿ ಈಗ ನಮ್ಮ ಬಡಾವಣೆಯಲ್ಲಿ ಮನೆ ಕಟ್ಟಿಸಿಕೊಂಡಿದ್ದಾರೆ. ಮನೆಯ ಮುಂದಿನ ಕೋಣೆಯೊಂದನ್ನು ಸಣ್ಣ ಕ್ಲಿನಿಕ್ ಆಗುವಂತೆ ರೂಪಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಮ್ಮಂಥ ಹಳೆಯ ಡಾಕ್ಟರಲ್ಲಿ ನಂಬಿಕೆಯಿಟ್ಟು ಸಾಮಾನ್ಯ ಅನಾರೋಗ್ಯಗಳ ಚಿಕಿತ್ಸೆಗೆ ಬರುವ ತಮ್ಮ ಹಳೆಯ ಸ್ನೇಹಿತರ, ಹತ್ತಿರದ ಬಂಧುಗಳ ಮತ್ತು ಅವರ ಕುಟುಂಬ ಸದಸ್ಯರ ಡಾಕ್ಟರಾಗಿದ್ದರು.
ಕ್ಲಿನಿಕ್ಕಿನಲ್ಲಿ ಹೆಚ್ಚಿನ ಜನರಿರಲಿಲ್ಲ. ಒಳಗಡೆಯಿದ್ದವರೊಬ್ಬರು ಹೊರಬಂದ ನಂತರ ಒಳ ಹೊಕ್ಕು ನಮಸ್ಕರಿಸಿದೆ. “ಬಾರಯ್ಯಾ, ಬಾ. ಏನು ಅಪರೂಪವಾಗಿಬಿಟ್ಟಿದ್ದೀಯಾ!” ಎಂದು ಪರಿಚಯದ ನಗೆ ಬೀರುತ್ತಾ ಸ್ವಾಗತಿಸಿದರು. “ಅಲ್ಲಾ, ದಿನಾ ಬರ್ತಿರಬೇಕೂಂತ ಹೇಳ್ತಿಲ್ಲ…ಆದ್ರೆ ನೀವೆಲ್ಲಾ ಬಂದು ಮಾತಾಡಿಸ್ಕೊಂಡು ಹೋಗ್ದಿದ್ರೆ ನಾವೂ ಸುಖವಾಗಿರಲ್ಲ…” ಎಂದು ನಕ್ಕರು.
“ಚೆನ್ನಾಗಿದ್ದೀರಾ, ಡಾಕ್ಟರ್?” ಎಂದು ಕೇಳಿದೆ ಔಪಚಾರಿಕವಾಗಿ, ಅವರು ತೋರಿಸಿದ ಸ್ಟೂಲಿನ ಮೇಲೆ ಕುಳಿತುಕೊಳ್ಳುತ್ತಾ.
“ತಲೇ ಮೇಲೆ ಗುಂಡುಕಲ್ಲೆತ್ತ್ ಹಾಕಿದ್ರೆ ಅದೇ ಒಡೆದ್ ಹೋಗೋ ಥರಾ ಇದ್ದೀನಿ…ನೀನ್ ಹೇಗಿದ್ದೀಯಾ?…ಇಲ್ಲಾ, ನೀನ್ ಚೆನ್ನಾಗಿದ್ರೆ ಇಲ್ಲಿಗ್ ಬರ್ತಿರ್ಲಿಲ್ಲ…ಅದೂ ಸರೀನೇ..ಏನ್ ತೊಂದ್ರೆ ಹೇಳು.” ಅವರ ಸ್ವಭಾವವೇ ಹೀಗೆ. ಲಘುಹಾಸ್ಯ ಮಾಡುತ್ತಾ, ನಗುತ್ತಾ ಇರುವವರು.
“ಚೆನ್ನಾಗೇ ಇದ್ದೀನಿ…ಅಥವಾ ಇದ್ದೆ ಅಂತನ್ನಿ…”
“ಹಾಗಂತ ನಾನೇನು ಅನ್ನೋದು..? ನೀssನ್ ಹೇಳು.” ನನ್ನ ಮಾತನ್ನು ನಡುವಲ್ಲೇ ಕತ್ತರಿಸಿ ಛೇಡಿಸಿದರು. “ಚೆನ್ನಾಗಿದ್ದವನಿಗೆ ಈಗೇನಾಯ್ತು?”
“ನಿನ್ನೆ ರಾತ್ರಿಯಿಂದ ಹೊಟ್ಟೆ ಸರಿಯಿಲ್ಲ…ಅಜೀರ್ಣದ್ ಥರಾ.. ಹೊಟ್ಟೆ ಉಬ್ಬಿಕೊಂಡಂತೆ…ಭಾರ…ರಾತ್ರಿಯೆಲ್ಲಾ ನಿದ್ದೆಯಿಲ್ಲ. ಬೆಳಗಿನಿಂದ ತಲೆನೋವು…”
ಹೊಟ್ಟೆ ಮುಟ್ಟಿ, ಒತ್ತಿ ಪರೀಕ್ಷಿಸಿದರು. ಹಣೆ, ಕಣ್ಣು, ನಾಲಗೆ, ಎಲ್ಲಾ ನೋಡಿದರು. ದೇಹದ ಉಷ್ಣವನ್ನು ಅಳೆದು ನೋಡಿ, “ಹೂ..ಙ್” ಎಂದರು. ‘ಏನು?’ ಎನ್ನುವಂತೆ ಅವರ ಮುಖ ನೋಡಿದೆ. ಒಂದೆರಡು ಕ್ಷಣ ಮಾತಾಡದೆ ಅವರೂ ನನ್ನ ಮುಖವನ್ನೇ ನೋಡುತ್ತಿದ್ದು, ಬಳಿಕ,
“ನಿನ್ನೆ ರಾತ್ರಿ ಊಟ ಎಲ್ಲಿ ಮಾಡ್ದೆ?” ಎಂದು ಕೇಳಿದರು.
“ಮನೇಲೇ…ಆದ್ರೆ ಸ್ವಲ್ಪ ಹೆವಿಯಾಗೋಯ್ತು…ನಮ್ ಮೈದುನ ಬಂದಿದ್ದಾ… ಡ್ರಿಂಕ್ಸೂ, ಜತೇಲಿ ಚಿಲೀ-ಚಿಕನ್ನೂ, ಚಿಪ್ಸೂ, ಇತ್ಯಾದಿ, ಊಟಾನೂ ಜಾಸ್ತೀನೇ ಆಗೋಯ್ತೂ…” ಸಾಮಾನ್ಯವಾಗಿ ನಾನು ಡಾಕ್ಟರ್ ಬಳಿ ಹೋದಾಗ ವಿವರವ್ವಗಿ ಹೇಳಿಬಿಡುತ್ತೇನೆ. ಇವರು ಪರಿಚಯದವರು; ದೂssರದ ಸಂಬಂಧವೂ ಹೌದು.
“ಹೂಂ! ಏನೇನ್ ತಿಂದೆ ಹೇಳೂ. ಡಾಕ್ಟರ್ ಹತ್ರ ಮುಚ್ಚು ಮರೆ ಇರಕೂಡದು,” ಎಂದು ಆಜ್ಞಾಪಿಸಿದರು.
“ಮುಚ್ಚುಮರೆ ಏನಿಲ್ಲಾ…ಮಟನ್ ಪಲಾವ್, ಪುದಿನ ಚಟ್ನಿ ಇತ್ತು…ಪುದಿನ ಇದ್ಮೇಲೆ ಅಜೀರ್ಣ ಆಗ್ಬಾರ್ದಿತ್ತು..ಮತ್ತೆ ನಮ್ ಮೈದುನನ ಫೇವರೈಟ್ ಅಂತ ಆಲೂ ಪರೋಟ ಮಾಡಿದ್ಳು…ನಾನು ಬರೇ ಎರಡಷ್ಟೇ ತಿಂದದ್ದು…ಅದೂ ಚಟ್ನೀಲ್ಲೇ.. ಆಮೇಲೆ ಅನ್ನ, ಚಿಕನ್ ಕರಿ, ರಸಮ್, ಮೊಸರನ್ನ…”
“ಡೆಸರ್ಟ್ಗೆ…?”
“ಏನಿಲ್ಲ, ಫ್ರುಟ್ ಸಲಾಡ್, ರಸಮಲಾಯಿ…”
“ಇವತ್ತು ಬೆಳಿಗ್ಗೆ..?”
“ಏನಿಲ್ಲಾ… ಎರಡೇ ಎರಡು ರೊಟ್ಟಿ, ಅಷ್ಟೇ…ಚಿಕನ್ ಕರೀಲಿ…”
“ಹೂ..ಙ್… ಮಧ್ಯಾಹ್ನ?”
” ಬರೇ ಅನ್ನಾ, ಮೊಸರು ಅಷ್ಟೇ.. ಅದೇ ಹೊಟ್ಟೆ ಭಾರ ಇತ್ತು…ತಿನ್ಲಿಕ್ಕಾಗ್ಲಿಲ್ಲ…”
“ನಿನ್ನೆ ಮಧ್ಯಾಹ್ನ ಏನ್ ಊಟ ಮಾಡ್ದೆ?”
“ಮಾಮೂಲು… ಅನ್ನ, ಹುಳಿ, ಸಾರು, ಮೊಸರು..ಅಫ್ ಕೋರ್ಸ್, ಪಲ್ಯ…”
“ನಿನ್ನೆ ಬೆಳಿಗ್ಗೆ..?”
“ಉಪ್ಪಿಟ್ಟು”
“ನಿಮ್ಮನೇಲಿ ಬೆಳಗಿನ ತಿಂಡಿ ಏನೆಲ್ಲಾ ಇರುತ್ತೆ?”
“ಏನ್ ಡಾಕ್ಟರ್? ಶೆರ್ಲಾಕ್ ಹೋಮ್ಸ್ ಥರಾ ಒಳ್ಳೇ ಪತ್ತೇದಾರಿಕೆ ನಡೆಸ್ತಿದ್ದೀರಲ್ಲಾ?” ಎಂದು ನಕ್ಕೆ.
“ನನ್ ಪ್ರಶ್ನೆಗುತ್ತರಿಸಯ್ಯಾ!”
“ಬೆಳಗ್ಗಿನ ತಿಂಡಿಗೆ ಒಂದಿವ್ಸಾ ಉಪ್ಪಿಟ್ಟು, ಇನ್ನೊಂದಿನಾ ರೊಟ್ಟೀ, ಇನ್ನೊಂದಿನ ದೋಸೇ, ಇಡ್ಲೀ, ಚಪಾತೀ, ಹೀಗೆ. ಯಾವತ್ತಾದ್ರೂ ಬ್ರೆಡ್-ಬಟರ್-ಜ್ಯಾಮ್…”
“ಒಳ್ಳೇ ರಸಿಕ ಕಣಯ್ಯಾ, ನೀನು! ಅದಿರ್ಲೀ…ನೀನು ಟೂವೀಲರ್ ಯಾವ್ದು ಇಟ್ಕೊಂಡಿದ್ದೀಯಾ?”
“ಯೆಜ್ಡೀ ಮೊಬೈಕ್…ನೈನ್ ಟೀನ್ ಎಯ್ಟೀ ಫೋರ್ ಮೋಡೆಲ್…”
“ಹೂಂ! ಕ್ರೇಜೀ, ಎಲ್ಲಾ ಕೂರ್ಗೀಸ್ ಥರಾ! ಪೆಟ್ರೋಲ್ ಗಾಡೀ ಅಲ್ವಾ?”
“ಜಾವಾದವ್ರು ಡೀಸಲ್ ಬೈಕ್ ಮಾಡ್ದಂಗಿಲ್ಲ…” ಸಲುಗೆಯಿಂದ ಛೇಡಿಸಿದೆ.
“ಹೌದೇನು…? ಅಂದ್ರೆ ಅದ್ಕೆ ಡೀಸಲ್ ಹಾಕೋ ಹಾಗಿಲ್ಲ,” ಎಂದರು ಹುಸಿ ಅಜ್ಞಾನವನ್ನು ತೋರಿಸುತ್ತಾ.
“ಇಲ್ಲ…”
“ಹಾಕಿದ್ರೆ ಏನಾಗುತ್ತೆ?” ಥಟ್ಟನೆ ಕೇಳಿದರು.
“ಏನಾಗುತ್ತೆ? ಸ್ಟಾರ್ಟಾಗಲ್ಲ”
“ಪೆಟ್ರೋಲ್ ಇಲ್ದಿದ್ರೂ ಸ್ಟಾರ್ಟ್ ಆಗಲ್ಲ, ಅಲ್ವಾ…ಅಂದ ಹಾಗೆ ಅದ್ರ ಟ್ಯಾಂಕ್ ಕೆಪ್ಯಾಸಿಟಿ ಎಷ್ಟು?”
“ಹದ್ನಾಕೂವರೆ ಲೀಟರ್”
“ಅದಕ್ಕಿಂತ ಜಾಸ್ತಿ ಪೆಟ್ರೋಲ್ ಹಾಕಕ್ಕಾಗಲ್ಲ, ಅಲ್ವಾ? ಗೇರ್ ಬಾಕ್ಸಿಗೆ ಆಯಿಲ್ ಇಲ್ದೆ ಓಡಿಸ್ತೀಯಾ, ಎಲ್ಲಾದ್ರೂ?”
“ಇಲ್ಲ…ಏನ್ ಡಾಕ್ಟ್ರೇ…ಅಜೀರ್ಣಾಂತ ಬಂದ್ರೆ ಇವೆಲ್ಲಾ ಕೇಳ್ತಾ ಕೂತಿದ್ದೀರಲ್ಲಾ, ಏನ್ ವಿಷ್ಯಾಂತ ಗೊತ್ತಾಗ್ಲಿಲ್ಲ..”
“ಅಲ್ಲಯ್ಯಾ…ನಿನ್ನ ಹತ್ತ್-ಹನ್ನೆರಡ್ ಸಾವಿರದ ಬೈಕಿಗೆ ಪೆಟ್ರೋಲೇ ಹಾಕ್ತೀಯ; ಡೀಸಲ್ ಹಾಕಲ್ಲ. ಟ್ಯಾಂಕ್ ಓವರ್ ಫಿಲ್ ಮಾಡೋಕಾಗಲ್ಲ. ಗೇರ್ ಆಯಿಲ್ ಇಲ್ದೆ ಓಡ್ಸಲ್ಲ. ಏನಾದ್ರೂ ಡಿಫೆಕ್ಟ್ ಗೊತ್ತಾದ ತಕ್ಷಣ ಮೆಕ್ಯಾನಿಕ್ ಹತ್ರ ತೊಗೊಂಡ್ ಹೋಗ್ತೀಯಾ, ಹೌದಲ್ವಾ?” ಅವರು ನಿಲ್ಲಿಸಿ, ಜ್ಞಾಪಿಸಿಕೊಂಡವರಂತೆ ನುಡಿದರು:
“ನಿನ್ನ ಹತ್ರ ಕಾರೂ ಇದೆ ಅಲ್ವಾ? ಅದಕ್ಕೂ ಹೀಗೇನೇ ಪೆಟ್ರೋಲೂ, ಆಯಿಲ್ಲೂ, ಕೂಲೆಂಟೂ, ಬ್ರೇಕ್ ಫ್ಲೂಯಿಡೂ, ಬ್ಯಾಟ್ರೀ, ಇತ್ಯಾದಿ ಎಲ್ಲಾ ಸರಿಯಾಗಿರೋ ಥರಾ ನೋಡ್ಕೊಳ್ತೀಯಾ. ಎಲ್ಲದರ ಲೆವೆಲ್ ಕೂಡಾ ಮೈಂಟೈನ್ ಮಾಡ್ಕೊಳ್ತೀಯಾ. ಬ್ರ್ಯಾಂಡ್ ಕೂಡಾ ಬದಲಾಯಿಸಲ್ಲ; ಹೌದ್ ತಾನೇ?”
‘ಯಾಕಿವೆಲ್ಲಾ?’ ಎಂದು ಅಂದುಕೊಳ್ಳುತ್ತಾ, “ಹೂಙ್” ಎಂದೆ.
“ಅಲ್ಲಯ್ಯಾ, ಈ ಒಂದ್ ಹತ್ಸಾವಿರಾ, ನಾಕೈದ್ ಲಕ್ಷ ಬೆಲೆಯ ಬೈಕ್,ಕಾರಿಗಿಂತ ಕಡೆಗೆಟ್ ಹೋಯ್ತೇನಯ್ಯ, ನಿನ್ನ ದೇಹಾ? ಅವಕ್ಕೆ ಎಲ್ಲೆಲ್ಲಿಗೆ ಏನೇನ್ ಬೇಕೋ ಅದದನ್ನೇ ಹಾಕ್ತೀಯಾ. ಅವಿಲ್ಲದೆ ಗಾಡಿ ಓಡ್ಸಲ್ಲ, ನೀನು… ನಿಜ ತಾನೇ? ಪೆಟ್ರೋಲ್ ಇಲ್ದಿದ್ರೆ ಗಾಡಿ ಓಡೋದಿರ್ಲಿ, ಸ್ಟಾರ್ಟೇ ಆಗಲ್ಲ! ರೆಗ್ಯುಲರ್ ಆಗಿ ಎಲ್ಲದರ ಕಂಡಿಶನ್ನೂ, ಲೆವಲ್ಲೂ, ಇತ್ಯಾದಿ ಚೆಕ್ ಮಾಡ್ತೀಯಾ. ಆರ್ ತಿಂಗಳಿಗೊಮ್ಮೆ ಗರಾಜಲ್ಲಿ ಬಿಟ್ಟು ಸರ್ವೀಸ್ ಮಾಡಿಸ್ತೀಯಾ. ಹೌದಲ್ವಾ?”
“ಹೂಂ”
“ಆದ್ರೆ ನಿನ್ನ ನೋಡೂ, ದಿನಕ್ಕೊಂದ್ ಥರಾದ್ ಊಟ, ತಿಂಡಿ. ಒಂದಿನ ಮೃಷ್ಟಾನ್ನ ಭೋಜನ, ಮರುದಿನ ಉಪವಾಸ, ಮೂರನೇ ದಿನ ಅರೆಹೊಟ್ಟೆ…ಆಙ್? ಉಪವಾಸವಿದ್ರೂ, ಅರೆ ಹೊಟ್ಟೆಲಿದ್ರೂ, ವಿಪರೀತ ತಿಂದ್ರೂ, ಒಂದೇ ಥರ ಕೆಲಸ ಮಾಡ್ತೀಯಾ! ಕಾಯಿಲೆ ಬಿದ್ರೂ ರೆಸ್ಟ್ ತೊಗೊಳ್ದೆ ಓಡಾಡ್ತಿರ್ತೀಯಾ! ವರ್ಷಕ್ಕೊಂದ್ ಸರ್ತೀನಾದ್ರೂ ಮೆಡಿಕಲ್ ಚೆಕಪ್ ಮಾಡಿಸ್ಕೊತ್ತೀಯಾ? ಅದೂ ಇಲ್ವಾ?
“ಒಂದೊಂದು ದಿನ ವಿಪರೀತ ಕೆಲಸ ಮಾಡ್ತೀಯಾ, ಇನ್ನೊಂದ್ ದಿನ ಪೂರ್ತಿ ಆರಾಮ್. ವಾರಾಂತ್ಯದ ರಾತ್ರಿ ಟೀವಿ ನೋಡ್ತಾ ನಿದ್ದೆ ಕೆಡ್ತೀಯಾ; ಮಾರಣೇ ದಿನವೆಲ್ಲಾ ನಿದ್ದೆ ಮಾಡ್ತೀಯ. ಹೌದು ತಾನೆ? ಊಟ ತಿಂಡಿಯ ಟೈಮಿಂಗ್ಸೆಲ್ಲಾ ಏರು-ಪೇರು. ಬಯೋಕ್ಲಾಕ್ ಹುಚ್ಚಾಬಟ್ಟೆಯಾಗಿಬಿಡುತ್ತೆ.
“ಅದ್ಯಾಕಯ್ಯಾ, ನಿನ್ನದೇ ಆದ ಶರೀರದ ಮೇಲೆ ಇಷ್ಟೋದು ಅಸಡ್ಡೆ? ನಿನ್ಗೆ ಒಂದ್ ಹತ್ ಸಾವಿರದಷ್ಟೂ ಬೆಲೆ ಇಲ್ವೇನಯ್ಯಾ?
“ನೋಡೂ, ನಮ್ ದೇಹಾನ ದೇವ್ರು ಮಾಡಿರೋದ್ರಿಂದ ನಾವಿದನ್ನ ಇಷ್ಟೊಂದು ನಿರ್ಲಕ್ಷ್ಯ ಮಾಡಿದ್ರೂ ಅದು ಓಡ್ತಿರುತ್ತೆ. ಅದೇ ನಿನ್ನ ಜಾವಾ ಕಂಪೆನೀನೋ, ಮಾರುತೀನೋ ಈ ದೇಹಾನ್ನ ತಯಾರಿಸಿದ್ರೆ ಯಾವತ್ತೋ ಬಿಸಾಕ್ಬೇಕಾಗ್ತಿತ್ತು…ಶಿಸ್ತಿನಿಂದ, ಗೌರವದಿಂದ ನಮ್ಮ ಶರೀರವನ್ನ ನೋಡ್ಕೋ ಬೇಕಪ್ಪಾ. ನನ್ನ ನೋಡೂ.. ಅರುವತ್ತೊಂಭತ್ತಾಯಿತು…ಜನ ನೋಡಿ ಐವತ್ತೈದು ಅಂತ ಹೇಳ್ತಾರೆ. ಯಾಕೆ? ನನ್ನ ದೇಹಾನ ಆ ರೀತೀಲಿ ಇಟ್ಕೊಂಡಿದ್ದೀನಿ. ದಿನಾಲೂ ಒಂದೇ ಥರದ ಊಟ-ತಿಂಡಿ ತೊಗೊಳ್ಳದಿದ್ರೂ, ಒಂದೇ ಅಳತೆಯಲ್ಲಿ ನಿರಕ್ಕಿನಲ್ಲಿ ತಿನ್ತೀನಿ. ಯಾರೇ ನಂಟ್ರು ಬಂದ್ರೂ ನನ್ನ ಊಟ ಒಂದೇ ಅಳತೇದ್ದು. ಒಂದೇ ಪೆಗ್ ವಿಸ್ಕಿ…ಒಂದ್ ಗಂಟೆ ನಿಧಾನವಾಗಿ ಖುಶೀಲಿ ಕುಡೀತೀನಿ. ಇನ್ನೊಬ್ಬರ ಬಲವಂತಕ್ಕೆ, ಅವರನ್ನ ಖುಶಿಪಡಿಸಲು ತಿನ್ನಲ್ಲ, ಕುಡಿಯಲ್ಲ. ಹೊತ್ತಿಗ್ ಸರಿಯಾಗೇ ಊಟ, ನಿದ್ದೆ, ವ್ಯಾಯಾಮ, ಎಲ್ಲ.
“ದೇಹಾನ ಚೆನ್ನಾಗಿ ನೋಡ್ಕೊಂಡ್ರೆ ಅದರೋಳ್ಗಿರೋ ಮನಸ್ಸೂ, ಆತ್ಮಾ ಎರಡೂ ಚೆನ್ನಾಗಿರುತ್ತೆ. ದೊಡ್ಡವರು ಅದನ್ನೇ ಹೇಳಿರೋದು: ದೇಹ ದೇವಸ್ಥಾನದಂತೆ ಅಂತ. ದೇವರು ಕಟ್ಟಿಸಿದ್ದು ಅದನ್ನ… ದೇವರೂಂತ ನೀನೊಪ್ಪದೇ ಇದ್ರೆ ಪ್ರಕೃತಿಮಾತೆ ಅಂತಿಟ್ಟುಕೋ.. ಇಲ್ಲಾ ಹಾಗೂ ಅಲ್ವಾ…ನಿನ್ನ ತಂದೆ-ತಾಯಿ ಕಟ್ಟಿದ ದೇವಸ್ಥಾನ ಅದು! ಅವರನ್ನ ಗೌರವಿಸೋದಾದ್ರೆ ಅವರು ನಿನ್ಗೆ ಕೊಟ್ಟಿರೋ ಈ ದೇವಸ್ಥಾನವನ್ನ ಗೌರವಿಸಿ, ಶಿಸ್ತಿನಲ್ಲಿಟ್ಕೋ…ಏನು? ಹಾಗಿಟ್ಟುಕೊಂಡ್ರೆ ಅಲ್ಲಿರೋ ದೇವರು, ಅಂದ್ರೆ ನಿನ್ನ ಆತ್ಮ ಪ್ರಸನ್ನನಾಗಿರ್ತಾನೆ. ಅರ್ಥವಾಯಿತಾ? ಇಲ್ಲಾ, ಏನೋ ಮುದುಕಾ ಬ್ಲಾ, ಬ್ಲಾ, ಅಂತ ವಟಗುಟ್ತಾನೇಂತ…”
“ಅಯ್ಯೋ, ಇಲ್ಲಾ ಡಾಕ್ಟ್ರೇ,” ನಡುವೆಯೇ ಅವಸರಿಸಿ ನುಡಿದೆ. “ನೀವು ಹೇಳಿದ್ದು ಸತ್ಯಸ್ಯ ಸತ್ಯ…. “
ಯಾವತ್ತೂ ನಗುನಗುತ್ತಾ ಹಾಸ್ಯ ಮಾಡುತ್ತಾ ಇರುವ ಈ ಕರುಂಬಯ್ಯ ಡಾಕ್ಟರು ಇಷ್ಟೊಂದು ಸರಳವಾಗಿ ದೇಹ ಮತ್ತು ಆತ್ಮದ ಬಗ್ಗೆ ವ್ಯಾಖ್ಯಾನ ಮಾಡುತ್ತಾರಲ್ಲ, ಎಂದು ಅಚ್ಚರಿಯಾಯಿತು!
ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ್ದೆ: ಸ್ಟೂಡಿಯೋ ಒ೦ದರಲ್ಲಿ ಅನ೦ತ ನಾಗ್‌ರವರ ಚಿತ್ರೀಕರಣ ನಡೆಯುತಿತ್ತು. ಒ೦ದು ಸ೦ಭಾಷಣೆಯಲ್ಲಿ “ಅಜ್ಞಾನ” ಅಂತೇನೋ ಒ೦ದು ಪದವಿತ್ತು. ಅನ೦ತ್ “ಅಜ್ಞಾನ” ಎಂದು ಉಚ್ಚರಿಸಿದರೆ ನಿರ್ದೇಶಕರು “ಅಗ್ನಾನ” ಅ೦ತ ತಿದ್ದುತ್ತಿದ್ದರು. ಅನ೦ತ್ ಮತ್ತೆ “ಅಜ್ಞಾನ” ಎಂದು ಉಚ್ಚರಿಸಿದರೆ ನಿರ್ದೇಶಕರು ಪುನಃ “ಅಗ್ನಾನ” ಅ೦ತಲೇ ತಿದ್ದುತ್ತಿದ್ದರು. ರೇಗಿದ ಅನ೦ತ್, “ರೀ, ಅದು ‘ಅಗ್ನಾನ’ ಅಲ್ಲ; ‘ಅಜ್ಞಾನ, ಅಜ್ಞಾನ’” ಎಂದು ತಿದ್ದಿ ಹೇಳಿದರು. ನಿರ್ದೇಶಕರು, ” ಇಲ್ಲಾ, ಅದರ ಸರಿಯಾದ ಉಚ್ಚಾರಣೆ ‘ಅಗ್ನಾನ’ “, ಎ೦ದೇ ವಾದಿಸಿದರು. ಅನ೦ತ್, “ಸರಿ. ಇನ್ನೊ೦ದು ಫ಼್ಲೋರಲ್ಲಿ ಡಾಕ್ಟರ್ ರಾಜ್‍ಕುಮಾರ್ ಇದ್ದಾರೆ; ಅವರನ್ನ ಕೇಳೋಣ,” ಎಂದು ಸಲಹೆ ಮಾಡಿದಾಗ ಅವರಲ್ಲಿ ಹೋಗಿ ತಮ್ಮ ಸಮಸ್ಯೆಯನ್ನು ಮುಂದಿಟ್ಟರು. ರಾಜ್‍ಕುಮಾರ್ ತಮ್ಮ ವಿಶಿಷ್ಟ ಶೈಲಿಯಲ್ಲಿ ನಸುನಕ್ಕು, ಅನಂತ ನಾಗ್ ಹೇಳುವುದೇ ಸರಿ. ‘ಅಗ್ನಾನ’ ಎಂದು ಉಚ್ಚರಿಸುವುದು ಸರಿಯಲ್ಲ; ‘ಅಜ್ಞಾನ’ ಎಂದೇ ಸರಿಯೆಂದು ತೀರ್ಪಿತ್ತರು.
ಕೆಲವರಿಗೆ ‘ಜ್ಞ’ ಎಂದೆನ್ನುವ ಒಂದು ಉಚ್ಚಾರಣೆ ಇದೆಯೆಂದೇ ತಿಳಿದಿಲ್ಲ. ಟೀವಿ, ರೇಡಿಯೊ, ಇತ್ಯಾದಿಗಳಲ್ಲಿ ಅನೌನ್ಸ್ ಮಾಡುವವರೂ ಹೀಗೇ ಇದ್ದಾರೆ. ನನ್ನೊಬ್ಬ ಗೆಳೆಯನಿಗೆ ಈ ಉಚ್ಚಾರಣೆಯೇ ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಅವನಿಗೆ ವ್ಯತ್ಯಾಸದ ಅರಿವು ಮೂಡಿಸಲು, “grateful” ಎನ್ನುವದಕ್ಕೆ ಕನ್ನಡ ಪದ ಯಾವುದೆಂದು ಕೇಳಿದೆ. “ಕೃತಘ್ನ” ಎಂದು ಹೇಳಿದ! “Ungrateful” ಎನ್ನುವದಕ್ಕೆ ಕನ್ನಡ ಪದ ಯಾವುದೆಂದರೆ. ಮತ್ತೆ “ಕೃತಘ್ನ” ಎಂದೇ ಹೇಳಿದ. ವಿರುದ್ಧಾರ್ಥವಿರುವ “grateful” ಮತ್ತು ungrateful” ಪದಗಳಿಗೆ ಒ೦ದೇ ಕನ್ನಡ ಪದ ಹೇಗಿರಲು ಸಾಧ್ಯ, ಎಂದು ಕೇಳಿದ್ದಕ್ಕೆ, ‘ಅಷ್ಟೂ ತಿಳಿಯದೇ?’ ಎನ್ನುವ ನಗೆದೋರಿ ಆತ, grateful = ಕೃತಗ್ನ; ungrateful = ಕೃತಘ್ನ, ಎಂದು ಬರೆದು ಜ್ಞಾನಭೋದನೆ ಮಾಡಿದ!
ಈ ರೀತಿಯ ಜನ ನೀವು ಮಾಡಿದ ಉಪಕಾರಕ್ಕೆ ಕೃತಜ್ಞತೆಯನ್ನು ಸೂಚಿಸದಿದ್ದರೆ ಬೇಸರಿಸದಿರಿ; ಅವರು ಕೃತಗ್ನರಾಗೇ ಇರುತ್ತಾರೆ; ಇಲ್ಲವೇ ಕ್ರುತಗ್ನರಾಗಿರುತ್ತಾರೆ!
ನನ್ನ ಪರಿಚಿತರ ಮನೆಗೊಮ್ಮೆ ಹೋಗಿದ್ದೆ. ಅವರ ಮನೆಯ ಬಳಿ ತಲಪುತ್ತಲೇ ಅವರು ತಮ್ಮ ಪಕ್ಕದ ಮನೆಯವನೊ೦ದಿಗೆ ಜಗಳವಾಡುತ್ತಿರುವುದು ಕಂಡುಬಂತು. ಸ್ವಲ್ಪ ಹೊತ್ತು ಬಿಟ್ಟು ಹೋಗೋಣವೇ ಎಂದುಕೊಳ್ಳುತ್ತಿರುವಷ್ಟರಲ್ಲೇ ನೆರೆಯಾತ, “ಹೋಗೋ ಬೋ…ಮಗನೇ…” ಎಂದು ನನ್ನ ಪರಿಚಿತರನ್ನು ಬಯ್ದುಬಿಟ್ಟ.
“ಏನೋ ಅಂದೇ?” ಅಂತ ಈತ ತೋಳೇರಿಸಿಕೊಂಡು ಆತನನ್ನು ಹೊಡೆಯಲು ಹೊರಟರು.
ಪರಿಸ್ಥಿತಿ ವಿಷಮಕ್ಕೇರುತ್ತದೆಯೆಂದು ನಾನು ಧಾವಿಸಿ, ಈತನನ್ನು ತಬ್ಬಿ ಹಿಡಿದು, “ಬೇಡ ಬನ್ರೀ..”, ಎಂದೆನ್ನುತ್ತಾ ಅವರ ಮನೆಯೊಳಕ್ಕೆ ತಳ್ಳಿದೆ. ಅವರ ಪತ್ನಿ ಬಂದು ಮುಂಬಾಗಿಲು ಹಾಕಿದರು.ಅವರಿನ್ನೂ ಕೂಗಾಡುತ್ತಲೇ ಇದ್ದರು:
“ಅವನ್ಯಾವನು ನನ್ನ ಬೋ…ಗಾಂತ ಕರೆಯೋದಕ್ಕೆ? ಅವನು ಹುಟ್ಟಿಲ್ಲಾಂತನ್ನಿಸ್ಬಿಡ್ತೀನಿ…”
ನಾನು, “ಅಯ್ಯೋ, ಸುಮ್ನಿರೀಪ್ಪಾ. ಅಂಥಾವರ್ ಜತೆ ಪದ್ಮಶ್ರೀ ಪ್ರಶಸ್ತಿ ಪಡೆದ ನೀವು ಜಗಳಾಡ್ಬಾರ್ದು…” ಎಂದೆ.
ತುಸು ಆಶ್ಚರ್ಯದಿಂದ ನನ್ನೆಡೆಗೆ ನೋಡಿ, “ನನಗ್ಯಾರ್ರೀ ಪದ್ಮಶ್ರೀ ಪ್ರಶಸ್ತಿ ಕೊಟ್ರು?” ಎಂದು ಕೇಳಿದರು.
“ನಾನೇಪ್ಪಾ.”
“ಇದೊಳ್ಳೆ ತಮಾಶೆ. ನೀವು ಪದ್ಮಶ್ರೀ ಪ್ರಶಸ್ತಿ ಕೊಡೋರಾ? ನೀವು ಕೊಟ್ರೆ ನನಗದು ಬಂದ್ಬಿಡ್ತಾ.. ಚೆನ್ನಾಗಿದೆ!” ಎಂದು ತುಸು ನಕ್ಕರು.
“ಮತ್ತೆ? ಅವರು ನಿಮಗೆ ಬೋ… ಅಂತ ಪ್ರಶಸ್ತಿ ಕೊಟ್ಟಾಗ ಅದನ್ನ ತೊಗೊಂಡು ಥ್ಯಾಂಕ್ಸ್ ಹೇಳೊಕ್ ಹೋಗ್ತಿದ್ರಿ?”
ಮತ್ತೆ ಕೋಪ ಮರುಕಳಿಸಿತು: “ಅವನ್ಯಾವನ್ರೀ ನನ್ನ ಹಾಗೆಲ್ಲಾ ಅನ್ನೋದಕ್ಕೆ…?”
“ಅಲ್ವೇ ಮತ್ತೆ? ಪ್ರಶಸ್ತಿ ಕೊಡೋದಕ್ಕೆ ನಾನೂ ಯಾವನೂ ಅಲ್ಲ; ಅವನೂ ಅಲ್ಲ. ಪದ್ಮಶ್ರೀಯಂತ ಒಳ್ಳೇ ಪ್ರಶಸ್ತಿ ಕೊಟ್ಟದ್ದನ್ನ ಒಪ್ಪಿಕೊಳ್ಳದ ನೀವು ಆ ಕೆಟ್ಟ ಮಾತಿನ ಪ್ರಶಸ್ತೀನೂ ಒಪ್ಪಿಕೋಬಾರದಲ್ವೇ? ಬಿಟ್ಬಿಡಿ… ಆ ಪ್ರಶಸ್ತಿ ಅವ್ನಿಗೇ ಇರುತ್ತೆ.”
ಒಂದು ಕ್ಷಣ ಸುಮ್ಮನಿದ್ದು ನನ್ನ ಮಾತನ್ನು ಮನನ ಮಾಡಿ, ಜೋರಾಗಿ ನಗಲಾರಂಭಿಸಿದರು.
