Latest Entries »

ರಾಮಯ್ಯ ಒ೦ದು ಸಣ್ಣ ಕಾರ್ಖಾನೆಯಲ್ಲಿ ದುಡಿಯುತ್ತಾನೆ. ಅವನ ಕಾರ್ಖಾನೆ ನಮ್ಮ ಕಾರ್ಖಾನೆಯ ಆರ್ಡರ್‌ಗಳನ್ನು ಪಡೆದು ವಸ್ತುಗಳನ್ನು ಸಿದ್ಧಪಡಿಸಿ ಪೂರೈಸುತ್ತದೆ. ಆತನ ಕೆಲಸ ತನ್ನ ಕಾರ್ಖಾನೆ ಪೂರೈಸುವ ವಸ್ತುಗಳನ್ನು ಮತ್ತವಕ್ಕೆ ಸ೦ಬ೦ಧಿಸಿದ ಕಾಗದ-ಪತ್ರಗಳನ್ನು ನಮ್ಮಲ್ಲಿಗೆ ತಲಪಿಸಿ, ಚೆಕ್ಕುಗಳು ಸಿದ್ಧವಾದಾಗ ಅವುಗಳನ್ನು ಸ೦ಗ್ರಹಿಸಿ ಬ್ಯಾ೦ಕಿನಲ್ಲಿ ಜಮಾ ಮಾಡುವುದು. ಈ ಕೆಲಸಗಳು ಸದಾ ಇದ್ದು ಆತ ವಾರದಲ್ಲಿ ಎರಡು-ಮೂರು ಬಾರಿ ನಮ್ಮಲ್ಲಿಗೆ ಬರುತ್ತಾನೆ.

ಹಳ್ಳಿಯ ಶಾಲೆಯಲ್ಲಿ ೧೦ನೇ ತರಗತಿಯವರೆಗೆ ಓದಿದ್ದ. ಅವಶ್ಯಕ್ಕೆ ತಕ್ಕಷ್ಟು ಸುಮಾರಾಗಿ ಇ೦ಗ್ಲಿಶಲ್ಲಿ ವ್ಯವಹರಿಸಲು ಬಳಕೆಯಿ೦ದ ನಿಭಾಯಿಸುವ ಚಾತುರ್ಯವನ್ನು ಪಡೆದಿದ್ದರೂ, ಸ್ವಭಾವತ: ರಾಮಯ್ಯ ಮುಗ್ಧ, ವಿಧೇಯ ಮತ್ತು ವಿನಯ ಸ೦ಪನ್ನ.

ಇಬ್ಬರು ಮಕ್ಕಳಿದ್ದು ಮಗಳ ಮದುವೆಯಾಗಿತ್ತು. ಅದೇನಾಯಿತೋ, ಮದುವೆಯಾಗಿ ಕೆಲವೇ ತಿ೦ಗಳಲ್ಲಿ ಮಗಳು ತೀರಿ ಹೋದಳು. ರಾಮಯ್ಯ ಸುಮಾರು ಮೂರು-ನಾಲ್ಕು ವಾರಗಳವರೆಗೆ ರಜೆಯಲ್ಲಿದ್ದ. ಆಮೇಲೆ ನಮ್ಮ ಕಾರ್ಖಾನೆಗೆ ಎ೦ದಿನ ಕೆಲಸಗಳಿಗಾಗಿ ಬ೦ದ. ಮನುಷ್ಯ ತೀರಾ ಇಳಿದು ಹೋಗಿದ್ದ. ವಿಷಯ ಗೊತ್ತಿದ್ದವರು ಸ೦ತಾಪ ಸೂಚಿಸಿದರು. ಫಿಲಾಸಫಿ ಹೇಳಿದರು. ಅವನ ಮುಖದ ಮೇಲೆ ನಸುನಗುವಿದ್ದರೂ ಒಳಗಿನ ದುಃಖ ಮರೆಮಾಡಲಾಗುತ್ತಿರಲಿಲ್ಲ.

ನಾಲ್ಕಾರು ದಿನಗಳ ಬಳಿಕ ನಮ್ಮ ಇಲಾಖೆಗೆ ಬ೦ದಿದ್ದ. ಇಲಾಖೆಯ ಮುಖ್ಯಾಧಿಕಾರಿ ಅಪ್ಪಚ್ಚು ರಾಮಯ್ಯ ನಮ್ಮ ಸಪ್ಲೈಯರ್ ಕಾರ್ಖಾನೆಯ ನೌಕರನಾಗಿದ್ದರೂ ಕರೆದು ಕುಳ್ಳಿರಿಸಿ ಕಾಫಿ-ಟೀ ಕೊಡಿಸುವ ಸೌಜನ್ಯವಿರುವವರು. ರಾಮಯ್ಯನಿಗೆ ಕೆಲವಾರು ವರ್ಷಗಳಿ೦ದಲೂ ಅವರ ಪರಿಚಯವಿದ್ದ ಕಾರಣ ಅವರನ್ನು ತುಂಬ ಗೌರವದಿ೦ದ ಕಾಣುತ್ತಿದ್ದ. ಕಾಫಿ ಕೊಡಿಸಿ, ಅವನ ಕುಟು೦ಬದವರ ಕ್ಷೇಮ-ಲಾಭವನ್ನು ವಿಚಾರಿಸಿ ಮಾತು ಕತೆಗಳಾದ ಬಳಿಕ ರಾಮಯ್ಯ ಅವರನ್ನುದ್ದೇಶಿಸಿ ಕೇಳಿದ:

“ಸಾರ್, ತಮ್ಮನ್ನೊ೦ದು ಪ್ರಶ್ನೆ ಕೇಳ್ಬೇಕೂ೦ತಿದ್ದೀನಿ…ಅಪ್ಪಣೆಕೊಟ್ರೆ ಕೇಳೋಣಾಂತ…”

“ಏನಪ್ಪಾ ಅದು?” ಅಪ್ಪಚ್ಚು ಕೇಳಿದರು.

“ಪರಸನಲ್ಲೂ ಸಾರ್…ತಾವು ತಪ್ಪುತಿಳ್ಕೊಳ್‌ದಿದ್ರೆ… ಕೇಳೋಣಾಂತಾ…” ರಾಮಯ್ಯ ರಾಗ ಎಳೆದ.

“ಕೇಳಯ್ಯಾ…”

” ಅಲ್ಲಾ ಸಾರ್, ನಾವೂ ಮನುಶ್ರನ್ನಾ…ಅ೦ದ್ರೇ ನಮ್ಮ ಹೆ೦ಡ್ತೀ ಮಕ್ಕ್‌ಳ್ನೆಲ್ಲಾ ಅಮ್ಮಾ, ಅಪ್ಪಾ, ಮಗೂ, ಪುಟ್ಟೀ೦ತೆಲ್ಲಾ ಕರೀತಿರ್ತೀವಿ…ಜೀವ೦ತ್ವಾಗಿದ್ದಾಗ್ಲೆಲ್ಲಾ ಇಷ್ಟೆಲ್ಲಾ ಪ್ರೀತಿಯಿ೦ದಾ, ಮುದ್ದಿನಿ೦ದಾ, ಏನೆಲ್ಲೋ… ಈ ಪೆಟ್ನೇಮೂ೦ತ ಅ೦ತಾರಲ್ಲಾ… ಹಾಗೆಲ್ಲಾ ಕರೀತೀವಿ… ಆದ್ರೆ ಮನುಶ್ನ ಪ್ರಾಣ ಹೋದ್ಮೇಲೆ ಡೆಡ್ಡ್ ಬಾಡೀ…ಬಾಡೀ…ಡೆಡ್ಡ್ ಬಾಡೀ ಬ೦ತಾ…ಬಾಡೀ ಎಷ್ಟೊತ್ತಿಗೆ ತೆಗ್ಯೋದು…ಅ೦ತೆಲ್ಲಾ ಡೆಡ್ಡ್ ಬಾಡೀ೦ತಾ… ಅಸ್ಟ್‌ವರ್ಸಾ ಮುದ್ದಿನಿ೦ದ ಕರೀತಿದ್ದು…ಪ್ರಾಣಾಹೋಗಿದ್ ತಕ್ಸಣ… ಹಿ೦ಗ್ ಕರೀತೀವಲ್ಲಾ…ಇದ್ಯಾಕೇ೦ತ…”

ನಮ್ಮ ಮುಖ್ಯಸ್ಥರ ಚೇಂಬರಿನಲ್ಲಿ ಕುಳಿತ್ತಿದ್ದ ನನಗೂ, ಮತ್ತೊಬ್ಬ ಸಹೋದ್ಯೊಗಿಗೂ ಸಿಡಿಲು ಬಡಿದ೦ತಾಯಿತು. ಅಪ್ಪಚ್ಚುರವರೂ ಈ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲವೆ೦ದು ಅವರಮುಖಭಾವವೇ ಹೇಳುತಿತ್ತು. ಗಂಭೀರವಾದ ಸನ್ನಿವೇಶದ ಬಿಗಿಯನ್ನು ಕಡಿಮೆ ಮಾಡುವ೦ತೆ ಅವರು ಬೆಲ್ ಒತ್ತಿ ಮೆಸೆ೦ಜರನನ್ನು ಕರೆದು, ಖಾಲಿಯಾಗಿದ್ದ ಕಪ್-ಸಾಸರ್‌ಗಳನ್ನು ತೆಗೆದುಕೊ೦ಡು ಹೋಗಲು ಹೇಳಿದರು. ಅವನು ಹೋದ ಬಳಿಕ, ಲಘುವಾಗಿ ಗಂಟಲು ಸರಿಪಡಿಸಿಕೊ೦ಡು ಅಪ್ಪಚ್ಚು, ಏನು ಉತ್ತರವನ್ನೀಯುವರೆ೦ದು ಕಾತುರದಿ೦ದ ಕುಳಿತಿದ್ದ ನಮ್ಮೆಡೆಗೊಮ್ಮೆ ಕ್ಷಿಪ್ರವಾಗಿ ನೋಡಿ, ನಿಧಾನವಾಗಿ ನುಡಿದರು:

“ನೋಡು, ರಾಮಯ್ಯಾ…ನೀನು ನನ್ ಚೇಂಬರಿಗೆ ಬ೦ದು ನಿನ್ಗೆ ನಾನು ಕೂತುಕೊಳ್ಳುವುದಕ್ಕೆ ಹೇಳಿದ್ಮೇಲೆ ಈ ಮೆಸೆ೦ಜರ್ ಹುಡುಗನ್ನ ಕರೆದು, ‘ಕಾಫಿ ತೊಗೊ೦ಡು ಬಾ’ ಅ೦ತ ಹೇಳಿದೆ. ಎಲ್ಲರ ಕಾಫಿ ಕುಡಿದಾದ್ಮೇಲೆ, ಮತ್ತವನ್ನ ಕರ್ದು, ‘ಕಪ್-ಸಾಸರ್ ತೊಗೊ೦ಡ್ ಹೋಗಯ್ಯಾ’, ಅ೦ತ೦ದೆ. ಹೌದ್ ತಾನೇ?”

“ಹೌದ್ಸಾರ್” ರಾಮಯ್ಯ ತನ್ನ ಪ್ರಶ್ನೆಗೆ ಇದೇನಪ್ಪಾ ಈ ಉತ್ತರಾ ಎಂದುಕೊಂಡು ಹೇಳಿದ.

“ಕಾಫಿ ತರಿಸ್ಬೇಕಾದ್ರೆ,” ಅಪ್ಪಚ್ಚು ಮು೦ದುವರೆಸಿದರು: “ಕಪ್ಪೂ, ಅದ್ರೊಳ್ಗೆ ಡಿಕಾಕ್ಷನ್ನೂ, ಹಾಲೂ ಸಕ್ರೆ ಹಾಕಿ ಸಾಸರಿನ ಮೇಲಿಟ್ಟುಕೊ೦ಡು ತೊಗೊ೦ಡ್ಬಾ, ಅ೦ತ ಹೇಳ್ಲಿಲ್ಲ… ಯಾರೂ ಆ ಥರಾ ಹೇಳಲ್ಲ, ಅಲ್ವಾ?”

“ಊಂಸಾರ್”

“ಕಾಫಿ ತೊಗೊ೦ಡು ಬಾ, ಅ೦ತ೦ದ್ರೆ ಕಪ್ಪಲ್ಲಿ ಹಾಕ್ಕೊಂಡೇ ತರೋದು…ಕಾಫಿ ಕುಡಿದಾದ್ಮೇಲೆ ಕಪ್-ಸಾಸರ್ ತೊಗೊಂಡ್‌ಹೋಗೂ೦ತ್ಲೇ ಅನ್ನೋದು…ಅಲ್ವಾ?ಕಾಫಿ ಬೇರೆ, ಕಪ್ ಬೇರೆ. ಕಪ್ನಲ್ಲಿ ಕಾಫಿ ಇದ್ರೂ ನಾವು ಬರೇ ಕಾಫೀ೦ತಷ್ಟೇ ಹೇಳ್ತೀವಿ. ಕಾಫಿ ಕುಡಿದಾದ್ಮೇಲೆ ಅದು ಬರೇ ಕಪ್, ಅಷ್ಟೇ…ಹೌದ್ ತಾನೇ?”

“ಊ೦ಸಾರ್”

“ಈ ನಿನ್ನ ಶರೀರ ರಾಮಯ್ಯಾ೦ತ ಅನ್ನಿಸ್ಕೊಳ್ಳೋದು ಅದ್ರಲ್ಲಿ ಪ್ರಾಣ ಇದ್ದಾಗ್ಲೇನೇ…ಹಾಗಿದ್ ಮಾತ್ರಕ್ಕೆ ನೀನು ಒಳಗ್ ಬ೦ದಾಗ, ತನ್ನ ಶರೀರದೊಳ್ಗೆ ಪ್ರಾಣ ಇಟ್ಕೊಂಡು ರಾಮಯ್ಯ ಬ೦ದಾ೦ತ ಅನ್ನೋದಿಲ್ಲ, ಅಲ್ವಾ?”

“ಇಲ್ಲಾ ಸಾರ್” ರಾಮಯ್ಯ ತುಸು ನಕ್ಕು ನುಡಿದ.

“ಪ್ರಾಣ ಹೋದ್ಮೇಲೆ ಶರೀರ ಉಳಿದಿರುತ್ತೆ. ಅದಕ್ಕೆ ಹೆಸರಿರೋದಿಲ್ಲ,” ಅಪ್ಪಚ್ಚು ಮುಂದುವರೆಸಿದರು. “ನೀನು ಇಷ್ಟ್ ವರ್ಷ ಪ್ರೀತಿಸಿರೋದು, ಮುದ್ಮಾಡಿರೋದು ನಿನ್ ಮಗಳ ಶರೀರಾನಲ್ಲ, ರಾಮಯ್ಯ! ಆ ಶರೀರದ್ ಒಳಗಿದ್ದ ಆತ್ಮವನ್ನ. ಆತ್ಮ ಹೋದ್ಮೇಲೆ ಶರೀರ ಏನೂ ಅಲ್ಲ. ಅದು ಹೋದ್ಮೇಲೆ ಶರೀರ ನಮಗ್ ಬೇಕಾಗೋ ಸ್ಥಿತೀಲಿ ಉಳಿಯೋದೂ ಇಲ್ಲ…”

ರಾಮಯ್ಯ ಕೈಗಳನ್ನು ಜೋಡಿಸಿ ಮೇಲಕ್ಕೆತ್ತಿ “ಗೊತ್ತಾಯ್ತು ಸಾರ್, ಅರ್ತ್ವಾಯ್ತು… ತುಂಬ ಚೆನ್ನಾಗಿ ಹೇಳಿದ್ರಿ ಸಾರ್! ನನ್ನ್ ಮಗಳು ಆ ಬಾಡೀಲಿದ್ಳು ಅಸ್ಟೇಯ. ಆ ಬಾಡೀನೇ ನನ್ನ್ ಮಗ್ಳಲ್ಲ…ಅಲ್ಲಿದ್ದ್ ಆತ್ಮ ನನ್ನ್ ಮಗ್ಳು…ಶರೀರದೊಳ್ಗಡೆ ಪ್ರಾಣ ಇದ್ರೆ ಅಲ್ಲಿ ಆತ್ಮ ಇರತ್ತೆ. ಸರ್ಯಾಗ್ ಹೇಳಿದ್ರಿ, ಸಾರ್!” ಎ೦ದು ನಮಸ್ಕರಿಸಿ ಎದ್ದು ನಿ೦ತ.

ಅವನ ಮಗಳು ಸತ್ತ ದಿನ ಅವಳನ್ನು ಡೆಡ್ಡ್ ಬಾಡೀ, ಹೆಣ, ಶವ ಎ೦ದೆಲ್ಲ ಕರೆದಾಗ ಅವನ್ ಮನಸ್ಸಿಗುಂಟಾಗಿದ್ದ ಯಾತನೆ ಈ ಹೊತ್ತಿನವರೆಗೂ ಹೆಪ್ಪುಗಟ್ಟಿದ್ದುದು ಈಗ ಕರಗಿ ಆವಿಯಾಗಿ ಹೋದುದು ಅವನ ನಿರುಮ್ಮಳಗೊಂಡ ಮುಖದಲ್ಲಿ ಕಾಣುತಿತ್ತು.

Advertisements

ಪುನರ್ಜನ್ಮ

Iynandaprabhu's Blog

ನಾ ಸತ್ತೆ.

ಕೊನೇಗೆ…

ಈ ಜನ್ಮಕ್ಕೆ ಅದೇ ತಾನೇ ಕೊನೇ?

Biggest Boss ಎದುರಿಗೆ ಕೈಕಟ್ಟಿಕೊಂಡು ನಿಂತೆ.

ನನ್ನ ಬಯ್ಯೋಗ್ರಫಿನೆಲ್ಲಾ ಓದಲಾಯಿತು:

ಹುಡುಗನಾಗಿದ್ದಾಗ ಅವನಿಗೆ ಬಯ್ದೆ; ಇವಳಿಗೆ ಹೊಡೆದೆ; ಮೇಷ್ಟರಿಗೆ ಅಡ್ಡಹೆಸರಿಟ್ಟೆ. ಅದನ್ನು ಕದ್ದೆ; ಇದನ್ನ ಸುಟ್ಟೆ; ಇತ್ಯಾದಿ.

ಬೀಡಿ, ಭಂಗಿ ಸೇದಿದೆ; ಮೋಸ ಮಾಡಿದೆ; ಜಗಳ ಕಾದೆ; ಮೊದಲಾಗಿ.

ದಾನ ಮಾಡಲಿಲ್ಲ; ದೇವಸ್ಥಾನಕ್ಕೆ ಹೋಗಲಿಲ್ಲ; ದೇವರನ್ನು ನೆನಸಲೂ ಇಲ್ಲ; ಕೈಲಾಗದವರಿಗೂ ವಂಚನೆ ಮಾಡಿದೆ, ಮುಂತಾದವು.

ಹೆಂಡತಿಗೆ ಹೊಡೆದೆ; ಮಕ್ಕಳನ್ನು ಮುದ್ದಿಸಲಿಲ್ಲ; ಸರಿಯಾಗಿ ನೋಡಿಕೊಳ್ಳಲೂ ಇಲ್ಲ; ಇತ್ಯಾದಿ.

ತಂದೆತಾಯರನ್ನು ಗೌರವಿಸಲಿಲ್ಲ; ಅವರ ಕಷ್ಟ ಕಾಲದಲ್ಲಿ ನೆರವಾಗಲಿಲ್ಲ; ಅವರ ಮುದಿತನವನ್ನು ಹಂಗಿಸಿದೆ, ಮೊದಲಾಗಿ.

ವಯಸ್ಸಾದ ಮೇಲೂ ದುಶ್ಚಟ ಬಿಡಲಿಲ್ಲ; ಒಳ್ಳೆಯದನ್ನ ನೆನಸಲೂ ಇಲ್ಲ, ಮುಂತಾಗಿ.

‘ಒಳ್ಳೆಯದ್ದೇನಾದರೂ ಅಕಸ್ಮಾತ್ತಾಗಿ, ಅಪ್ಪಿತಪ್ಪಿ ಮಾಡಲಾಗಿತ್ತೇ?’ ಎಂಬ ಪ್ರಶ್ನೆ ಬಂತು.

‘ಸಾಧ್ಯವಾದಾಗಲೆಲ್ಲಾ ಕನ್ನಡದಲ್ಲೇ ಮಾತಾಡುತ್ತಿದ್ದ’, ಎಂದು ಚಿತ್ರಗುಪ್ತ ಉತ್ತರಿಸಿದರೂ ಕೂಡಲೇ,

‘ಬೇರಿನ್ಯಾವ ಭಾಷೆಯಲ್ಲೂ ಕಿಂಚಿತ್ತೂ ಪರಿಣಿತಿ ಇಲ್ಲ, ಇವನಿಗೆ’ ಎಂದು ಸೇರಿಸಿದ.

ಸರಿ. ಜಜ್‌ಮೆಂಟ್ ಪಾಸಾಯಿತು. ನರಕದ ಎಲ್ಲಾ ಉರಿಯುವ ಒಲೆ, ಕುದಿಯುವ ಕೊಪ್ಪರಿಗೆ, ಸುಡುವ ಕಡಾಯಿ, ಇತ್ಯಾದಿ ಪರಿಕರಣಗಳಲ್ಲಿ heat treatment processing cycleಗಳಲ್ಲಿ ದೀರ್ಘಕಾಲದ ಶಿಕ್ಷೆಗಳು.

‘ವಾಪಸಾದ ಮೇಲೆ ಏನು? ನರಜನ್ಮವೋ, ನಾಯಿಜನ್ಮವೋ?’ ಎಂದು ಚಿತ್ರಗುಪ್ತ ಪ್ರಶ್ನಿಸಿದ.

‘ಛೆ, ಛೆ! ನಾಯಿ ಜನ್ಮ ಹೋಗಲಿ ನರಜನ್ಮಕ್ಕೂ ಲಾಯಕ್ಕಿಲ್ಲ’, ಎಂದು Boss ಆರ್ಡರಿತ್ತರು. ‘ ಕೀಳು ಜಂತುವಾಗಿ ಹುಟ್ಟಲಿ!’

‘ಅಂದರೆ..?’ ಸರಿಯಾದ ಸ್ಥಳಕ್ಕೆ ವರ್ಗಾಯಿಸದಿದ್ದರೆ ಚಿತ್ರಗುಪ್ತನಿಗೆ remark ಬರುತ್ತಲ್ವಾ?

ಕ್ಷಣಕಾಲ ಯೋಚಿಸಿ, ‘ಯಾವದಾದರೂ ಕಾಡಿನಲ್ಲಿ ಕಣ್ಣು, ಕಿವಿ, ಮೂಗು…

View original post 138 more words

[ಈ ಬರೆಹ ನಿಜ ಘಟನೆಯನ್ನಾಧರಿಸಿದ್ದರೂ, ಹೆಸರುಗಳೆಲ್ಲವೂ ಕಾಲ್ಪನಿಕ.]

“ಲೋ…”

“… … …”

“ಲೇಯ್..!”

“… … …”

“ಲೇಯ್, ಮಾದಾ! ಬಾರೋ ಇಲ್ಲೀ!”

“ಬಂದೇಣಾ…”

“ಇಪ್ಪತ್ತೊಂದು ಇಪ್ಪತ್ಮೂರು ತಕೊಂಬಾರೋ”

ಕುಕ್ಕರಗಾಲಲ್ಲಿ ಕುಳಿತು ಟೈಮರನ್ನು ಸೆಟ್ ಮಾಡುತ್ತಿದ್ದ ಮುರುಗೇಶ ಮಾದ ತಂದು ಕೊಟ್ಟ ಸ್ಪ್ಯಾನರಿನ ಒಂದು ತುದಿಯನ್ನು ಕೈಯಲ್ಲಿ ಹಿಡಿದು, ಅಚಾನಕ್ಕಾಗಿ ಮಾದನ ಕಣಕಾಲಿನ ಹಿಂಭಾಗಕ್ಕೆ ಹೊಡೆದ.

“ಏನೋ ಅಲ್ಲಿ ಕೋತಿ ಕುಣಿಸ್ತಿದಾರೇನೋ? ಏನೋ ಮಾಡ್ತಿದ್ದೆ ಅಲ್ಲೀ… ಕೋತಿ ತರಾ ಅಲ್ ಬಿಟ್ಕೊಂಡೂ, ಕಳ್ಳ ನನ್ ಮಗ್ನೇ?”

“ಕರಡಿ ಕುಣಿಸ್ತಿದ್ರು” ಅಮಾಯಕತನದಿಂದ ಮೆಲುದನಿಯಲ್ಲಿ ಹುಡುಗ ಹೇಳಿದ.

“ಕರಡಿ ಕುಣಿಸ್ತಿದ್ದಾರಾ? ಅಲ್ಕಾ ನನ್ ಮಗ್ನೇ!” ಮುರುಗೇಶ ಮತ್ತೊಮ್ಮೆ ಸ್ಪಾನರ್ ಬೀಸಿದ.

“ಇಲ್ಲಣ್ಣೋ…” ಎಂದು ಅಳುದನಿಯಲ್ಲಿ ಚೀರಿ ಮಾದ ಪಕ್ಕಕ್ಕೆ ಜಿಗಿದು ತಪ್ಪಿಸಿಕೊಂಡ.

“ಓಗಲ್ಲಿ! ಸೆಲ್ವ ಟೈರ್ ಬಿಚ್ತಾವ್ನೆ…ಇಡ್ಕೋ ಓಗು…” ಎಂದ ಮುರುಗೇಶ ನನ್ನ ಕಡೆ ತಿರುಗಿದ.

“ಕೋತಿ ಕುಣೀತಿದ್ಯೇನೋ ಅಂತ ಕೇಳಿದ್ರೆ ಕರಡೀ ಕುಣೀತಿದೇಂತ ಜವಾಬ್ ಕೊಡ್ತವ್ನೆ, ನೋಡಿ… ಎಸ್ಟು ಕೊಬ್ಬು ನನ್ ಮಕ್ಳಿಗೇ…” ಹೀಗನ್ನು ತ್ತಿದ್ದಂತೆಯೇ ಕರಡಿ ಕುಣಿಸುವವನು ವರ್ಕ್ ಶಾಪಿನ ಎದುರು ನಿಂತ. ಸ್ವಲ್ಪ ಹೊತ್ತು ಕರಡಿಯನ್ನೂ ಅದನ್ನು ಕುಣಿಸುವವನನ್ನೂ ನೋಡಿದ ಮುರುಗೇಶ, ಹಾಗೆಯೇ ನನ್ನತ್ತ ನೋಡಿ, ಮಾದನ ಕಡೆ ದೃಷ್ಟಿ ಹಾಯಿಸಿದ. ಬಳಿಕ, ಕರಡಿಯಾತನಿಗೆ, “ಲೇಯ್, ಓಗೋ ಅತ್ಲಾ ಕಡೆ! ಬಂದು ನಿಂತ್ಬಿಟ್ಟ …ಎದೂರ್ಗಡೆ…ಕಸ್ಟಮರ್ಸುಗಳ್ಗೆ ಡಿಶ್ಟರ್ಬ್ ಮಾಡೋಕೆ. ಓಗೋ…” ಎಂದು ಗದರಿದ. “ಈ ನನ್ ಮಕ್ಳು ಇಂಗೇನೇ…” ಎಂದು ಈ ಕರಡಿ ಕುಣಿಸುವವನನ್ನು ಬಯ್ಯುತ್ತಲೇ, ಅವನಂತೆಯೇ ಬರುವ ಬಸವನಾಟದವನನ್ನೂ, ಕಾವಡಿ ಹೊತ್ತು ಬರುವವರನ್ನೂ ಬಯ್ದ. ಹಾಗೆಯೇ ಅವರು ಹೊಟ್ಟೆಪಾಡಿಗಾಗಿ ಕಷ್ಟಪಡುವದರ ಬಗ್ಗೆ ಸಹಾನುಭೂತಿಯನ್ನೂ ತೋರಿಸಿದ. “ಇವ್ರ ಒಟ್ಟೆಪಾಡಿಗೆ ಈ ಕರಡೀನಾ, ಕೋತೀನಾ, ಆವನ್ನಾ, ಬಸವಣ್ಣನ್ನಾ, ಎಲ್ಲಾ ಇಡಕೊಂಡು ಬಂದು, ಅವುಗಳನ್ನೂ ಸತಾಯಿಸ್ತವ್ರೆ ನನ್ ಮಕ್ಳು!” ಎಂದೂ ಬಯ್ದ!

ರಸ್ತೆಗೆ ತೆರೆದುಕೊಂಡಿರುವ ಹತ್ತು x ಹತ್ತು ಚದರಡಿ ಅಳತೆಯ ಕೋಣೆಯಲ್ಲಿ ಮುರುಗೇಶನ ‘ಮುರುಗೇಶ್ ಸರ್ವಿಸ್ ಸೆಂಟರ್’ ಇದೆ. ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆತ. ಯೆಜ್ಡಿ ಮತ್ತು ಬುಲೆಟ್ ಮೋಬೈಕ್ಗಳ ‘ಸ್ಪೆಶಲಿಸ್ಟ್’. “ಈಗಿನ ಗಾಡಿಗಳೆಲ್ಲ ಏನೂ ಯೂಸಿಲ್ಲ ಸಾರ್. ಈರುಳ್ಳಿ ದಂಟಿನ ಫ್ರೇಮೂ, ಬೆಳ್ಳುಳ್ಳಿ ಸಿಪ್ಪೆಯ ಟ್ಯಾಂಕೂ, ಬಾಡೀ, ಮಡ್ಗಾರ್ಡೂ ಎಲ್ಲಾ…ಓಯ್ತಾ ಎಲ್ಲಾರ ಒಂದ್ಸಾರಿ ಬಿತ್ತೂಂತನ್ನಿ…ಮೂರ್ನಾಕ್ ಸಾವಿರ ಚೌರ! … ನಿಮ್ ಯೆಜ್ಡಿ ತರ ಅಲ್ಲ ಬಿಡಿ.” ನನ್ನನ್ನು ಮೆಚ್ಚಿಸುವ ಮಾತಲ್ಲ, ಆ ಬೈಕಿನ ಮೇಲಿನ ಅಭಿಮಾನದ ಮಾತದು ಎಂದು ನನಗೊತ್ತು.

ಅಷ್ಟರಲ್ಲಿ ಸೆಲ್ವ ಕೈಯಲ್ಲೊಂದು ಸಣ್ಣ ಬೇರಿಂಗ್ ಹಿಡಿದುಕೊಂಡು ಬಂದು ಮುರುಗೇಶನಿಗೆ ತೋರಿಸುತ್ತಾ, “ಇದ್ ಪಾರ್ ಅಣ್ಣೇ, ಎಲ್ಲಾ ಓಗ್ಬಿಟ್ಟಾಯ್ತು. ಮಾರಿಸಿ ಒಸತಾಕ್ಬೇಕು” ಎಂದ.

“ಇದನ್ಯಾರ್ಗಯ್ಯಾ ಮಾರ್ತೀಯಾ ನೀನೂ…? ಯಾವ್ದೋ ದೇವಸ್ತಾನದ್ ರಥದ್ ಚಕ್ರದ್ ಥರಾ ಗಡಗಡಾಂತ ಶಬ್ದ ಮಾಡ್ತೈತೆ?” ಬೇರಿಂಗಿನ ನಡುವಿಗೆ ಬೆರಳು ತೂರಿಸಿ ಇನ್ನೊಂದು ಕೈಯಿಂದ ಅದನ್ನು ತಿರುಗಿಸಿ ಮುರುಗೇಶ ಕೇಳಿದ.

“ಮಾರೋದಿಲ್ಲ ಬಾಸ್! ಚೇಂಜ್ ಮಾಡೂಂತ ಏಳ್ದೆ…” ಹಲ್ಲು ಕಿರಿದು ಸೆಲ್ವ ನುಡಿದ.

“ಆ..ಯ್! ನೀನೂ ನಿನ್ನ ಬಾಶೇನೂ…” ಎಂದು, ನನ್ನನ್ನು ಉದ್ದೇಶಿಸಿ ಹೇಳಿದ: “ಸಾರ್, ಈ ಬೇರಿಂಗುದು ಲೈಪ್ ಒಂಟೋಗೈತೆ ನೋಡಿ.” ಎಂದು ಬೆರಳನ್ನು ತೂರಿಸಿದ್ದ ಅದನ್ನು ತಿರುಗಿಸಿ ತೋರಿಸಿದ.

“ಸರಿ, ಬದಲಾಯಿಸು. ಎಷ್ಟಾಗುತ್ತೆ?”

“ಆಗತ್ತೆ ಸಾರ್. ನೂರು ರೂಪಾಯಿಯಿಂದ ಶ್ಟಾರಟ್ ಆಗಿ ನಾನೂರು ಐನೂರರವರ್ಗೂ ಐತೆ. ನೋಡ್ಕಂಡು ಒಳ್ಳೇ ಪಾರ್ಟೇ ತರ್ಸಿ ಹಾಕೋಣ ಸಾರ್. ಯಾಕೆಂದ್ರೆ ಇದು ವೀಲ್ ಬೇರಿಂಗೂ… ಅದೂ ಪ್ರಂಟ್ ವೀಲೂ…” ಎಂದು ಅದರ ಬಗ್ಗೆ ಒಂದು ಸಣ್ಣ ಲೆಕ್ಚರನ್ನೇ ಹೊಡೆದ.

ಬಳಿಕ, ಸ್ವಲ್ಪ ಆಕಡೆ ಪ್ಲಾಸ್ಟಿಕ್ ಬೇಸಿನಿನಲ್ಲಿ ವೀಲ್ ಚೈನೊಂದನ್ನು ತೊಳೆಯುತ್ತಿದ್ದ ಅರೆಪಡ್ಡೆಹುಡುಗನನ್ನು , “ಲೇಯ್! ಬಾರೋ, ಇಲ್ಲಿ!” ಎಂದು ಕರೆದ. “ನೀನು ಬಾರತ್ ಶಾಪಿಗೆ ಹೋಗೀ….” ಎಂದು ನಿಲ್ಲಿಸಿ, ಆ ಹುಡುಗನನ್ನೇ ದಿಟ್ಟಿಸಿ, “ಯಾವ ಬಾರತ್ ಶಾಪೋ? ಬಾರತ್ ಸ್ವೀಟ್ ಶಾಪಿಗೆ ಹೋಗಿ ಕೇಳ್ಬೇಡ… ಗೂಬೇ ತರಾ…ಬಾರತ್ ಆಟೋ ಪಾರ್ಟ್ ಶಾಪು. ಆ ಬಾಲಾಜಿ ಬಾರ್ ಪಕ್ಕದಲ್ಲಿದ್ಯಲ್ಲೋ ಅದೋ, ಮಂಕೇ!” ಎಂದು ನನ್ನತ್ತ ತಿರುಗಿ, “ಅಂಗಂದ್ರೇನೇ ಈ ನನ್ ಮಕ್ಳಿಗ್ ಗೊತ್ತಾಗೋದು. ಬಾರೂ, ಬ್ರಾಂದಿ ಶಾಪೂ ಎಲ್ಲಾ ಗೊತ್ತವೆ, ಈ ಕಳ್ಳ ಬಡ್ಮಕ್ಳಿಗೆ!” ಎಂದ.

ಮತ್ತೆ ಆ ಹುಡುಗನತ್ತ ತಿರುಗಿ, “ಬಾರತ್ ಆಟೋ ಶಾಪಿಗೆ ಓಗಿ ಯೋಳು…” ಎಂದು ಅವನನ್ನೇ ದಿಟ್ಟಿಸಿದ. “ಏನಂತ ಯೋಳ್ತೀಯೋ?”

ಹುಡುಗ ಸುಮ್ಮನೇ ನಿಂತಿದ್ದ. “ಓಗಿ ಯೋಳೂ, ಸಾರಿಗೆ ಈ ಥರಾ ಐಟಮ್ ಬೇಕೂ ಅಂತ ಯೋಳು” ಎಂದು ನನ್ನತ್ತ ತಿರುಗಿ, “ಇದು ಒರಿಜಿನಲ್ ಪಾರ್ಟೂ ಸಾರ್. ಈಗೆಲ್ಲಾ ಡೂಪ್ಳಿಕೇಟೇ ಸಾರ್ ಬರೋದು; ಎಲ್ಲಾ ಮೋಸಾನೇ…” ಎಂದು, ಹುಡುಗನಿಗೆ, “ಊಂ, ಏನೂಂತ ಯೋಳ್ತೀಯೋ…ಈ ಸಾರಿಗೇ ಅಂತ ಯೋಳು…” ಎಂದು ನನ್ನತ್ತ ಗೋಣಾಡಿಸಿ ಸೂಚಿಸಿ, “ಏನು, ಗೊತ್ತಾಯ್ತೇನೋ?” ಎಂದ.

ಹುಡುಗ ಜೋರಾಗಿ ತಲೆ ಅಲ್ಲಾಡಿಸಿ, ಹಳೆಯ ಬೇರಿಂಗನ್ನೆತ್ತಿಕೊಂಡು ಹೊರನಡೆದ. “ಲೆಕ್ಕದ್ ಬುಕ್ಕಲ್ಲಿ ಬರ್ಕೊಳ್ಳಾಕೇಳೋ…” ಹೋಗುತ್ತಿದ್ದ ಹುಡುಗನ ಬೆನ್ನಿಗೆ ಹೇಳಿದ, ಮುರುಗೇಶ. “ನಾ ಪೋನ್ ಮಾಡಿ ಯೊಳ್ತೀನಿ ಓಗು” ಎನ್ನುತ್ತಲೇ ಜೇಬಿನಿಂದ ಮೊಬೈಲ್ ಫೋನನ್ನೆತ್ತಿಕೊಳ್ಳುತ್ತಾ ನನ್ನತ್ತ ನೋಡಿ, “ನನ್ನತ್ರ ರೆಗ್ಯುರಲಾಗಿ ಬರೋ ಕಸ್ಟಮರ್ಸ್ಗಳಿಗ್ ಮಾತ್ರಾ ಈ ಪರಸನಲ್ ಸರ್ವೀಸು ಸಾರ್” ಎಂದ.

ನಾನು ನಸುನಗುವಿನೊಡನೆ ಅಂಗೀಕೃತಿಯ ಗೋಣಾಡಿಸುವದು ಅನಿವಾರ್ಯವಾಗಿತ್ತು.

ಆಮೇಲೆ ನಿಧಾನವಾಗಿ ಅಂದುಕೊಂಡೆ: ‘ಆ ಭಾರತ್ ಆಟೋ ಪಾರ್ಟ್ ಶಾಪಿನವನಿಗೆ ಈ ಹುಡುಗ ಹೋಗಿ, ಸಾರಿಗೆ ಈ ತರಹದ ಬೇರಿಂಗ್ ಬೇಕು, ಅಂತ ಒಂದು ವೇಳೆ ಅಂದರೆ, ಅವನಿಗೆ ಯಾವ ಸಾರೂ ಅಂತ ಅರ್ಥವಾದೀತು? ಅದನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೂ ಆತ ಮಾಡಿಯಾನೇ? ಇದೆಲ್ಲಾ ಮುರುಗೇಶನ ಕಸ್ಟಮರ್ ಸ್ಯಾಟಿಸ್ಫ್ಯಾಕ್ಷನ್ ಟೆಕ್ನಿಕ್ ಅಷ್ಟೇ’

ಪುನರ್ಜನ್ಮ

ನಾ ಸತ್ತೆ.

ಕೊನೇಗೆ…

ಈ ಜನ್ಮಕ್ಕೆ ಅದೇ ತಾನೇ ಕೊನೇ?

Biggest Boss ಎದುರಿಗೆ ಕೈಕಟ್ಟಿಕೊಂಡು ನಿಂತೆ.

ನನ್ನ ಬಯ್ಯೋಗ್ರಫಿನೆಲ್ಲಾ ಓದಲಾಯಿತು:

ಹುಡುಗನಾಗಿದ್ದಾಗ ಅವನಿಗೆ ಬಯ್ದೆ; ಇವಳಿಗೆ ಹೊಡೆದೆ; ಮೇಷ್ಟರಿಗೆ ಅಡ್ಡಹೆಸರಿಟ್ಟೆ. ಅದನ್ನು ಕದ್ದೆ; ಇದನ್ನ ಸುಟ್ಟೆ; ಇತ್ಯಾದಿ.

ಬೀಡಿ, ಭಂಗಿ ಸೇದಿದೆ; ಮೋಸ ಮಾಡಿದೆ; ಜಗಳ ಕಾದೆ; ಮೊದಲಾಗಿ.

ದಾನ ಮಾಡಲಿಲ್ಲ; ದೇವಸ್ಥಾನಕ್ಕೆ ಹೋಗಲಿಲ್ಲ; ದೇವರನ್ನು ನೆನಸಲೂ ಇಲ್ಲ; ಕೈಲಾಗದವರಿಗೂ ವಂಚನೆ ಮಾಡಿದೆ, ಮುಂತಾದವು.

ಹೆಂಡತಿಗೆ ಹೊಡೆದೆ; ಮಕ್ಕಳನ್ನು ಮುದ್ದಿಸಲಿಲ್ಲ; ಸರಿಯಾಗಿ ನೋಡಿಕೊಳ್ಳಲೂ ಇಲ್ಲ; ಇತ್ಯಾದಿ.

ತಂದೆತಾಯರನ್ನು ಗೌರವಿಸಲಿಲ್ಲ; ಅವರ ಕಷ್ಟ ಕಾಲದಲ್ಲಿ ನೆರವಾಗಲಿಲ್ಲ; ಅವರ ಮುದಿತನವನ್ನು ಹಂಗಿಸಿದೆ, ಮೊದಲಾಗಿ.

ವಯಸ್ಸಾದ ಮೇಲೂ ದುಶ್ಚಟ ಬಿಡಲಿಲ್ಲ; ಒಳ್ಳೆಯದನ್ನ ನೆನಸಲೂ ಇಲ್ಲ, ಮುಂತಾಗಿ.

‘ಒಳ್ಳೆಯದ್ದೇನಾದರೂ ಅಕಸ್ಮಾತ್ತಾಗಿ, ಅಪ್ಪಿತಪ್ಪಿ ಮಾಡಲಾಗಿತ್ತೇ?’ ಎಂಬ ಪ್ರಶ್ನೆ ಬಂತು.

‘ಸಾಧ್ಯವಾದಾಗಲೆಲ್ಲಾ ಕನ್ನಡದಲ್ಲೇ ಮಾತಾಡುತ್ತಿದ್ದ’, ಎಂದು ಚಿತ್ರಗುಪ್ತ ಉತ್ತರಿಸಿದರೂ ಕೂಡಲೇ,

‘ಬೇರಿನ್ಯಾವ ಭಾಷೆಯಲ್ಲೂ ಕಿಂಚಿತ್ತೂ ಪರಿಣಿತಿ ಇಲ್ಲ, ಇವನಿಗೆ’ ಎಂದು ಸೇರಿಸಿದ.

ಸರಿ. ಜಜ್‌ಮೆಂಟ್ ಪಾಸಾಯಿತು. ನರಕದ ಎಲ್ಲಾ ಉರಿಯುವ ಒಲೆ, ಕುದಿಯುವ ಕೊಪ್ಪರಿಗೆ, ಸುಡುವ ಕಡಾಯಿ, ಇತ್ಯಾದಿ ಪರಿಕರಣಗಳಲ್ಲಿ heat treatment processing cycleಗಳಲ್ಲಿ ದೀರ್ಘಕಾಲದ ಶಿಕ್ಷೆಗಳು.

‘ವಾಪಸಾದ ಮೇಲೆ ಏನು? ನರಜನ್ಮವೋ, ನಾಯಿಜನ್ಮವೋ?’ ಎಂದು ಚಿತ್ರಗುಪ್ತ ಪ್ರಶ್ನಿಸಿದ.

‘ಛೆ, ಛೆ! ನಾಯಿ ಜನ್ಮ ಹೋಗಲಿ ನರಜನ್ಮಕ್ಕೂ ಲಾಯಕ್ಕಿಲ್ಲ’, ಎಂದು Boss ಆರ್ಡರಿತ್ತರು. ‘ ಕೀಳು ಜಂತುವಾಗಿ ಹುಟ್ಟಲಿ!’

‘ಅಂದರೆ..?’ ಸರಿಯಾದ ಸ್ಥಳಕ್ಕೆ ವರ್ಗಾಯಿಸದಿದ್ದರೆ ಚಿತ್ರಗುಪ್ತನಿಗೆ remark ಬರುತ್ತಲ್ವಾ?

ಕ್ಷಣಕಾಲ ಯೋಚಿಸಿ, ‘ಯಾವದಾದರೂ ಕಾಡಿನಲ್ಲಿ ಕಣ್ಣು, ಕಿವಿ, ಮೂಗು, ಕೈ, ಕಾಲು, ಏನೂ ಇಲ್ಲದ ಎರೆಹುಳವಾಗಿ ಹುಟ್ಟಿ, ಮಣ್ಣುತಿನ್ನುತ್ತಿರಲಿ!’ ಎಂದು ಆಜ್ಞೆಯಾಯಿತು.

ಎಲ್ಲಾ ಮಾತುಕತೆ ಮುಗಿದ ಮೇಲೆ, ತಲೆಯ ತುಸು ಮೇಲ್ಗಡೆ ಕೈಯೆತ್ತಿ, ‘ರಾಜ್ಯೋತ್ಸವದ ದಿನಗಳಲ್ಲಿ ಕನ್ನಡದಲ್ಲಿ ಮಾತಾಡಿದ್ದೆ. ಅದಕ್ಕೇನಾದರೂ concession ಇದ್ಯೇ?’ ಎಂದು ಅಂಜುತ್ತಾ ಕೇಳಿದೆ.

ಚಿತ್ರ ಗುಪ್ತನೆಡೆಗೆ ‘ಹೌದೋ?’ ಎಂದು ಪ್ರಶ್ನಿಸುವಂತೆ ಪ್ರಭುಗಳು (ಅಂದ್ರೆ ಬಿಗ್ ಬಾಸು) ನೋಡಿದರು.

‘ಹೂಂ. ಒಂದು ಐದಾರು ವರ್ಷ ಮಾತಾಡಿರ ಬಹುದು’, ledger ನೋಡುತ್ತಾ ಚಿತ್ರಗುಪ್ತ ಹೇಳಿ, ‘ಅದಕ್ಕೆ?’ ಎಂದು ತೀಕ್ಷ್ಣವಾಗಿ ನನ್ನೆಡೆ ನೋಡಿದ.

‘ಅದು ಒಳ್ಳೆಯ ಕೆಲಸವಾದರೆ ನನ್ನ ಒಂದು ಪ್ರಾರ್ಥನೆ, ದೇವರೂ…’ ಎಂದೆ.

‘ಹೂಂ…?’

‘ಎರೆಹುಳುವಾಗಿ ಹುಟ್ಟುವಾಗ ಕರ್ನಾಟಕದಲ್ಲೇ posting ಕೊಡ್ಸಿ ಸ್ವಾಮೀ’

‘ಕರ್ನಾಟಕದ ಒಂದು ಮೂಲೆಯಲ್ಲಿ dry areaಕ್ಕೆ ಹಾಕಿಬಿಡಿ, ಪ್ರಭೂ’ ಎಂದ ಚಿತ್ರಗುಪ್ತ.

‘Dry areaದಲ್ಲಿ ಎರೆಹುಳುವಿಗೇನು ಕೆಲಸವಿರುತ್ತೆ, ದೇವರೂ..? ಕರ್ನಾಟಕದ ಮೂಲೆಯಲ್ಲೇ ಹಾಕಿ. ಕೊಡಗೂ ಕೇರಳದ ಗಡಿಪ್ರದೇಶದಲ್ಲಿ, ಆದ್ರೆ ಕರ್ನಾಟಕದೊಳಗೇ post ಮಾಡಿ ಸ್ವಾಮೀ,’ ಎಂದೆ.

‘ತಥಾಸ್ತು!’ ಎಂದು ಅಂಕಿತ ಹೇಳಿ, ಮಹಾಪ್ರಭುಗಳು ಸ್ವಲ್ಪ ಕಾಲ ನನ್ನತ್ತಲೇ ಯೋಚಿಸುತ್ತಾ ನೋಡಿ, ‘ಲೋ, ಫಟಿಂಗಾ! ನಿನಗೆ ಮಣ್ಣುಮುಕ್ಕಿಸುವದಕ್ಕೆ ಎರೆಹುಳುವಿನ ಜನ್ಮ ಕೊಟ್ಟರೂ, ಕನ್ನಡದ ಮಣ್ಣೇ ತಿನ್ನುವ ಹಾಗೆ ಯೋಜಿಸಿದೀಯಲ್ಲಯ್ಯಾ, ಘಾಟಿ!’ ಎಂದು ಮೆಚ್ಚುಗೆಯ ನಗು ಸೂಸಿ, ‘ಹೋಗು ಯಾವತ್ತೋ ನಾಲ್ಕು ಮಾತು ಕನ್ನಡದಲ್ಲಿ ಆಡಿದ್ದೀಯಲ್ಲಾ… ಹೂಂ! ಹೋಗು!’ ಎಂದರು.

‘ಕೊಡಗಿನ ಮಣ್ಣು ಸ್ವಲ್ಪ ಹೆಚ್ಚು ಸಿಹಿಯಾಗಿರುತ್ತೆ, ದೇವರೂ’ ಎಂದು ಹಲ್ಲು ಗಿಂಜಿದೆ.

 

ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೀವೆ

ನಾಕೆಮ್ಮೆ ಕರೆದ ನೊರೆಹಾಲು | ಸಕ್ಕರೆ

ನೀ ಕೇಳಿದಾಗ ಕೊಡುವೆನು || ೧ ||

ಯಾತಕಳುತಾನೆಂದು ಎಲ್ಲಾರು ಕೇಳ್ಯಾರು

ಕಾಯದಾ ಹಾಲ ಕೆನೆ ಬೇಡಿ | ಕಂದಯ್ಯ

ಕಾಡಿ ಕೈಬಿಟ್ಟು ಇಳಿಯಾನು || ೨ ||

ಅಳುವ ಕಂದನ ತುಟಿಯು ಹವಳದಾ ಕುಡಿಹಂಗೆ

ಕುಡಿಹುಬ್ಬು ಬೇವಿನೆಸಳ್ಹಂಗೇ |ಕಣ್ಣೋಟ

ಶಿವನ ಕೈಯಲಗು ಹೊಳೆದಂಗೇ || ೩ ||

ಅತ್ತರೇ ಅಳಲವ್ವ ಈ ಕೂಸು ನನಗಿರಲಿ

ಕೆಟ್ಟರೇ ಕೆಡಲಿ ಮನೆಗೆಲಸ ಕಂದನಂಥ

ಮಕ್ಕಳಿರಲವ್ವ ಮನೆತುಂಬಾ || ೪ ||

ಜೋಗುಳಾ ಹಾಡಿದರೆ ಆಗಲೇ ಕೇಳ್ಯಾನು

ಹಾಲ ಹಂಬಲವ ಮರೆತಾನು ಕಂದಂಗೆ

ಜೋಗುಳದಾಗ ಅತಿ ಮುದ್ದಾ || ೫ ||

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ

ಎತ್ತಿ ಕೊಳ್ಳೆಂಬ ಹಠವಿಲ್ಲ ನಿನ್ನಂಥ

ಹತ್ತು ಮಕ್ಕಳು ಇರಬಹುದು || ೬ ||

ಜನಪದ ಹಾಡುಗಳು ತಮ್ಮ ಲಾಲಿತ್ಯ, ಮಾಧುರ್ಯ, ಸೊಗಸುಗಾರಿಕೆ, ಇತ್ಯಾದಿಗಳಿಗೆ ಹೆಸರುಪಡೆದಿರುವವು. ಎಲ್ಲಾ ಭಾಷೆಗಳ ಜನಪದ ಸಾಹಿತ್ಯಗಳಿಗೂ ಈ ಮಾತು ಅನ್ವಯವಾಗುತ್ತದೆ. ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ಜೀವನರಂಗದಲ್ಲಿ ವಿದ್ಯುಚ್ಛಕ್ತಿ, ಅಡಿಗೆ ಅನಿಲ, ಮೋಟರುವಾಹನಗಳು, ಇವೇ ಮೊದಲಾದ ಆಧುನಿಕ ಸೌಲಭ್ಯಗಳು ಪ್ರವೇಶಿಸಿರದಿದ್ದ ಕಾಲದಲ್ಲಿ, ಮಗುವೊಂದರ ಹುಟ್ಟು, ಅದರ ಲಾಲನೆ-ಪಾಲನೆ, ಅದರ ಬಾಲ್ಯ, ಯೌವನ, ಪ್ರೇಮ-ಪ್ರಣಯ, ಜೀವನ, ಮದುವೆ, ಬದುಕು, ಬವಣೆ, ಇತ್ಯಾದಿ ಘಟ್ಟಗಳಲ್ಲಿ ನಡೆಯುವಂಥ ಪ್ರತಿಯೊಂದು ಸಂದರ್ಭದಲ್ಲೂ ಹಾಡಿಕೊಳ್ಳುವ ಹಳ್ಳಿಯ ಹಾಡುಗಳು ಅನೇಕ.

ಈ ಪ್ರಸ್ತುತದ ಹಾಡು ಒಂದು ಜೋಗುಳ. ಅಳುತ್ತಿರುವ ಮಗುವಿಗೆ ಬೇಕಾದದು ಸಕ್ಕರೆ ಬೆರೆಸಿದ ನೊರೆಹಾಲು. ಯಾವೊಂದು ತೆರನ ಆಟಿಗೆಯೂ ಅಲ್ಲ. ಆದರೆ ಆ ತುಂಟನಿಗೆ ಕಾಯಿಸದ ಆ ನೊರೆ ಹಾಲಿನ ಕೆನೆ ಬೇಕು. ಕಂದ ಅತ್ತರೆ ಅಳಲಿ; ಮನೆಗೆಲಸ ಕೆಟ್ಟರೆ ಕೆಡಲಿ ಎನ್ನುವ ತಾಯಿ ಅಳುವಾ ಕಂದನ ತುಟಿ, ಬಾಗಿದ ಕುಡಿಹುಬ್ಬುಗಳನ್ನು ನೋಡಿ ಸಂತೋಷಿಸುತ್ತಾಳೆ. ತಾನು ಹಾಡುವ ಜೋಗಳಕ್ಕೆ ಎಲ್ಲವನ್ನೂ ಮರೆತ ಮಗುವಿನಂಥ ಹತ್ತು ಮಕ್ಕಳಿರಬಹುದೆನ್ನುತ್ತಾಳೆ.

ಗ್ರಾಮಫೋನ್ ಇದ್ದ ಕಾಲದಲ್ಲಿ ಅದರಲ್ಲಿ ಈ ಹಾಡನ್ನು ಕೇಳಿದಷ್ಟೇ ನೆನಪು. ಯಾರು ಹಾಡಿದ್ದರೋ! ಬಹುಶಃ ಕೀ ಶೇ ಕಾಳಿಂಗರಾಯರ ಸಹಗಾಯಕಿಯಾಗಿದ್ದ ಸೋಹನ್ ಕುಮಾರಿಯವರಿರಬಹುದು. ಕೆಸೆಟ್ ಯುಗದಲ್ಲಿ ಬಹುಶಃ ಶ್ರೀಮತಿ ಬಿ ಕೆ ಸುಮಿತ್ರಾರವರು ಹಾಡಿದ ಹಾಡನ್ನು ಕೇಳಿದ ಜ್ಞಾಪಕ. ಈಗ ಸೌ. ಸೌಮ್ಯಾ ರಾವ್ ಎಷ್ಟೊಂದು ಮಧುರವಾಗಿ ಹಾಡಿದ್ದಾರೆ, ಕೇಳಿ! ಆ ಮೆಲ್ಲುಲಿಯ ಜೋಗುಳಕ್ಕೆ ಯಾವ ತುಂಟ-ತುಂಟಿಯರೇ ಏಕೆ, ನಾವೇ ಮೈಮರೆತುಬಿಡುತ್ತೇವೆ.

ಹಿಂದಿ ಚಿತ್ರರಂಗದಲ್ಲಿ ರಾಜಕಪೂರನ ಹೆಸರು ಅಜರಾಮರವಾಗಿರುವಂಥದ್ದು. ಅತ್ಯುನ್ನತ ಮಟ್ಟದ ಪ್ರದರ್ಶಕ (showman) ಎಂಬ ಹೆಸರನ್ನು ಪಡೆದ ಈತ ತನ್ನ ಮೊದಮೊದಲ ಚಿತ್ರಗಳಲ್ಲೇ ಅನೇಕ ಪ್ರಯೋಗಗಳನ್ನು ಮಾಡಿದವನು. “ಏಕ್, ದೋ, ತೀನ್, ಮೌಸಮ್ ಹೈ ರಂಗೀನ್…” ಎಂದು ಆರಂಭವಾಗುವ (ಮೇಲಿರುವ ಚಿತ್ರವನ್ನು ಕ್ಲಿಕ್ಕಿಸಿ) ಈ ಹಾಡು ೧೯೫೧ರಲ್ಲಿ ಅವನು ಬಿಡುಗಡೆಗೊಳಿಸಿದ ‘ಆವಾರಾ’ ಚಿತ್ರದ ನೈಟ್‌ಕ್ಲಬ್ ದೃಶ್ಯದ್ದು. ಶಮ್‌ಶಾದ್ ಬೇಗಮ್ ಹಾಡಿದ ಈ ಹಾಡಿನುದ್ದಕ್ಕೂ ಕ್ಲಬ್ಬಿನಲ್ಲಿ ನಡೆಯುವ ಗಲಾಟೆ-ಗದ್ದಲವಿದೆ. ಆದರೂ ಹಾಡನ್ನು ಬಹುತೇಕವಾಗಿ ಸ್ಪಷ್ಟವಾಗಿ ಕೇಳಬಹುದು.

೧೯೪೮ರಲ್ಲಿ ಬಿಡುಗಡೆಯಾದ ರಾಜಕಪೂರನ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ‘ಆಗ್’ ನಲ್ಲಿ ಬಳಸಿದ ದೃಶ್ಯಾವಳಿಗಳು, ಸೆಟ್ಟಿಂಗ್‌ಗಳು, ಕತ್ತಲೆ-ಬೆಳಕಿನ ಸಂಯೋಜನೆ, ಮೊದಲಾದವು ವಿಶಿಷ್ಟವಾಗಿದ್ದಂತೆಯೇ, ಕೊನೆಯಲ್ಲಿ ನಾಯಕನಟ ರಾಜಕಪೂರನ ಮುಖ ಸುಟ್ಟುಹೋಗಿ ವಿರೂಪಗೊಳ್ಳುವದೂ ಆಗಿನ ಕಾಲಕ್ಕೆ ವಿಶೇಷವಾಗಿತ್ತು.

ಹಾಗೆಯೇ ೧೯೫೬ರ ಚಿತ್ರ ‘ಜಾಗ್ತೇ ರಹೋ’ದಲ್ಲಿ ಅವನಿಗಿರುವ ಸಂಭಾಷಣೆಗಳು ಅತ್ಯಂತ ಕಡಿಮೆಯಷ್ಟೇ ಅಲ್ಲ; ಆಗಿನ ಕಾಲದಲ್ಲಿ ಅವನ ಚಿತ್ರಗಳಲ್ಲಿ ನಾಯಕಿ-ನಟಿಯಾಗಿದ್ದ ನರ್ಗಿಸ್ ತೆರೆಯ ಮೇಲೆ ಬರುವದು ಕೊಟ್ಟಕೊನೆಯ ದೃಶ್ಯದಲ್ಲಿ. ಸುಪ್ರಭಾತವನ್ನು ಬಯಸುವ ಹಾಡೊಂದನ್ನು ಹಾಡುತ್ತಾ, ಮೂಡಲ ದಿಕ್ಕಲ್ಲಿ ಬೆಳಕು ಹರಿದು ಜಗತ್ತನ್ನೆಲ್ಲಾ ತುಂಬುತ್ತಿರುವಾಗ ಅವಳು ಬರುತ್ತಾಳೆ!