ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೀವೆ

ನಾಕೆಮ್ಮೆ ಕರೆದ ನೊರೆಹಾಲು | ಸಕ್ಕರೆ

ನೀ ಕೇಳಿದಾಗ ಕೊಡುವೆನು || ೧ ||

ಯಾತಕಳುತಾನೆಂದು ಎಲ್ಲಾರು ಕೇಳ್ಯಾರು

ಕಾಯದಾ ಹಾಲ ಕೆನೆ ಬೇಡಿ | ಕಂದಯ್ಯ

ಕಾಡಿ ಕೈಬಿಟ್ಟು ಇಳಿಯಾನು || ೨ ||

ಅಳುವ ಕಂದನ ತುಟಿಯು ಹವಳದಾ ಕುಡಿಹಂಗೆ

ಕುಡಿಹುಬ್ಬು ಬೇವಿನೆಸಳ್ಹಂಗೇ |ಕಣ್ಣೋಟ

ಶಿವನ ಕೈಯಲಗು ಹೊಳೆದಂಗೇ || ೩ ||

ಅತ್ತರೇ ಅಳಲವ್ವ ಈ ಕೂಸು ನನಗಿರಲಿ

ಕೆಟ್ಟರೇ ಕೆಡಲಿ ಮನೆಗೆಲಸ ಕಂದನಂಥ

ಮಕ್ಕಳಿರಲವ್ವ ಮನೆತುಂಬಾ || ೪ ||

ಜೋಗುಳಾ ಹಾಡಿದರೆ ಆಗಲೇ ಕೇಳ್ಯಾನು

ಹಾಲ ಹಂಬಲವ ಮರೆತಾನು ಕಂದಂಗೆ

ಜೋಗುಳದಾಗ ಅತಿ ಮುದ್ದಾ || ೫ ||

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ

ಎತ್ತಿ ಕೊಳ್ಳೆಂಬ ಹಠವಿಲ್ಲ ನಿನ್ನಂಥ

ಹತ್ತು ಮಕ್ಕಳು ಇರಬಹುದು || ೬ ||

ಜನಪದ ಹಾಡುಗಳು ತಮ್ಮ ಲಾಲಿತ್ಯ, ಮಾಧುರ್ಯ, ಸೊಗಸುಗಾರಿಕೆ, ಇತ್ಯಾದಿಗಳಿಗೆ ಹೆಸರುಪಡೆದಿರುವವು. ಎಲ್ಲಾ ಭಾಷೆಗಳ ಜನಪದ ಸಾಹಿತ್ಯಗಳಿಗೂ ಈ ಮಾತು ಅನ್ವಯವಾಗುತ್ತದೆ. ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ಜೀವನರಂಗದಲ್ಲಿ ವಿದ್ಯುಚ್ಛಕ್ತಿ, ಅಡಿಗೆ ಅನಿಲ, ಮೋಟರುವಾಹನಗಳು, ಇವೇ ಮೊದಲಾದ ಆಧುನಿಕ ಸೌಲಭ್ಯಗಳು ಪ್ರವೇಶಿಸಿರದಿದ್ದ ಕಾಲದಲ್ಲಿ, ಮಗುವೊಂದರ ಹುಟ್ಟು, ಅದರ ಲಾಲನೆ-ಪಾಲನೆ, ಅದರ ಬಾಲ್ಯ, ಯೌವನ, ಪ್ರೇಮ-ಪ್ರಣಯ, ಜೀವನ, ಮದುವೆ, ಬದುಕು, ಬವಣೆ, ಇತ್ಯಾದಿ ಘಟ್ಟಗಳಲ್ಲಿ ನಡೆಯುವಂಥ ಪ್ರತಿಯೊಂದು ಸಂದರ್ಭದಲ್ಲೂ ಹಾಡಿಕೊಳ್ಳುವ ಹಳ್ಳಿಯ ಹಾಡುಗಳು ಅನೇಕ.

ಈ ಪ್ರಸ್ತುತದ ಹಾಡು ಒಂದು ಜೋಗುಳ. ಅಳುತ್ತಿರುವ ಮಗುವಿಗೆ ಬೇಕಾದದು ಸಕ್ಕರೆ ಬೆರೆಸಿದ ನೊರೆಹಾಲು. ಯಾವೊಂದು ತೆರನ ಆಟಿಗೆಯೂ ಅಲ್ಲ. ಆದರೆ ಆ ತುಂಟನಿಗೆ ಕಾಯಿಸದ ಆ ನೊರೆ ಹಾಲಿನ ಕೆನೆ ಬೇಕು. ಕಂದ ಅತ್ತರೆ ಅಳಲಿ; ಮನೆಗೆಲಸ ಕೆಟ್ಟರೆ ಕೆಡಲಿ ಎನ್ನುವ ತಾಯಿ ಅಳುವಾ ಕಂದನ ತುಟಿ, ಬಾಗಿದ ಕುಡಿಹುಬ್ಬುಗಳನ್ನು ನೋಡಿ ಸಂತೋಷಿಸುತ್ತಾಳೆ. ತಾನು ಹಾಡುವ ಜೋಗಳಕ್ಕೆ ಎಲ್ಲವನ್ನೂ ಮರೆತ ಮಗುವಿನಂಥ ಹತ್ತು ಮಕ್ಕಳಿರಬಹುದೆನ್ನುತ್ತಾಳೆ.

ಗ್ರಾಮಫೋನ್ ಇದ್ದ ಕಾಲದಲ್ಲಿ ಅದರಲ್ಲಿ ಈ ಹಾಡನ್ನು ಕೇಳಿದಷ್ಟೇ ನೆನಪು. ಯಾರು ಹಾಡಿದ್ದರೋ! ಬಹುಶಃ ಕೀ ಶೇ ಕಾಳಿಂಗರಾಯರ ಸಹಗಾಯಕಿಯಾಗಿದ್ದ ಸೋಹನ್ ಕುಮಾರಿಯವರಿರಬಹುದು. ಕೆಸೆಟ್ ಯುಗದಲ್ಲಿ ಬಹುಶಃ ಶ್ರೀಮತಿ ಬಿ ಕೆ ಸುಮಿತ್ರಾರವರು ಹಾಡಿದ ಹಾಡನ್ನು ಕೇಳಿದ ಜ್ಞಾಪಕ. ಈಗ ಸೌ. ಸೌಮ್ಯಾ ರಾವ್ ಎಷ್ಟೊಂದು ಮಧುರವಾಗಿ ಹಾಡಿದ್ದಾರೆ, ಕೇಳಿ! ಆ ಮೆಲ್ಲುಲಿಯ ಜೋಗುಳಕ್ಕೆ ಯಾವ ತುಂಟ-ತುಂಟಿಯರೇ ಏಕೆ, ನಾವೇ ಮೈಮರೆತುಬಿಡುತ್ತೇವೆ.

Advertisements