ಹಿಂದಿ ಚಿತ್ರರಂಗದಲ್ಲಿ ರಾಜಕಪೂರನ ಹೆಸರು ಅಜರಾಮರವಾಗಿರುವಂಥದ್ದು. ಅತ್ಯುನ್ನತ ಮಟ್ಟದ ಪ್ರದರ್ಶಕ (showman) ಎಂಬ ಹೆಸರನ್ನು ಪಡೆದ ಈತ ತನ್ನ ಮೊದಮೊದಲ ಚಿತ್ರಗಳಲ್ಲೇ ಅನೇಕ ಪ್ರಯೋಗಗಳನ್ನು ಮಾಡಿದವನು. “ಏಕ್, ದೋ, ತೀನ್, ಮೌಸಮ್ ಹೈ ರಂಗೀನ್…” ಎಂದು ಆರಂಭವಾಗುವ (ಮೇಲಿರುವ ಚಿತ್ರವನ್ನು ಕ್ಲಿಕ್ಕಿಸಿ) ಈ ಹಾಡು ೧೯೫೧ರಲ್ಲಿ ಅವನು ಬಿಡುಗಡೆಗೊಳಿಸಿದ ‘ಆವಾರಾ’ ಚಿತ್ರದ ನೈಟ್‌ಕ್ಲಬ್ ದೃಶ್ಯದ್ದು. ಶಮ್‌ಶಾದ್ ಬೇಗಮ್ ಹಾಡಿದ ಈ ಹಾಡಿನುದ್ದಕ್ಕೂ ಕ್ಲಬ್ಬಿನಲ್ಲಿ ನಡೆಯುವ ಗಲಾಟೆ-ಗದ್ದಲವಿದೆ. ಆದರೂ ಹಾಡನ್ನು ಬಹುತೇಕವಾಗಿ ಸ್ಪಷ್ಟವಾಗಿ ಕೇಳಬಹುದು.

೧೯೪೮ರಲ್ಲಿ ಬಿಡುಗಡೆಯಾದ ರಾಜಕಪೂರನ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಚಿತ್ರ ‘ಆಗ್’ ನಲ್ಲಿ ಬಳಸಿದ ದೃಶ್ಯಾವಳಿಗಳು, ಸೆಟ್ಟಿಂಗ್‌ಗಳು, ಕತ್ತಲೆ-ಬೆಳಕಿನ ಸಂಯೋಜನೆ, ಮೊದಲಾದವು ವಿಶಿಷ್ಟವಾಗಿದ್ದಂತೆಯೇ, ಕೊನೆಯಲ್ಲಿ ನಾಯಕನಟ ರಾಜಕಪೂರನ ಮುಖ ಸುಟ್ಟುಹೋಗಿ ವಿರೂಪಗೊಳ್ಳುವದೂ ಆಗಿನ ಕಾಲಕ್ಕೆ ವಿಶೇಷವಾಗಿತ್ತು.

ಹಾಗೆಯೇ ೧೯೫೬ರ ಚಿತ್ರ ‘ಜಾಗ್ತೇ ರಹೋ’ದಲ್ಲಿ ಅವನಿಗಿರುವ ಸಂಭಾಷಣೆಗಳು ಅತ್ಯಂತ ಕಡಿಮೆಯಷ್ಟೇ ಅಲ್ಲ; ಆಗಿನ ಕಾಲದಲ್ಲಿ ಅವನ ಚಿತ್ರಗಳಲ್ಲಿ ನಾಯಕಿ-ನಟಿಯಾಗಿದ್ದ ನರ್ಗಿಸ್ ತೆರೆಯ ಮೇಲೆ ಬರುವದು ಕೊಟ್ಟಕೊನೆಯ ದೃಶ್ಯದಲ್ಲಿ. ಸುಪ್ರಭಾತವನ್ನು ಬಯಸುವ ಹಾಡೊಂದನ್ನು ಹಾಡುತ್ತಾ, ಮೂಡಲ ದಿಕ್ಕಲ್ಲಿ ಬೆಳಕು ಹರಿದು ಜಗತ್ತನ್ನೆಲ್ಲಾ ತುಂಬುತ್ತಿರುವಾಗ ಅವಳು ಬರುತ್ತಾಳೆ!